August 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ನೂತನ ಕಚೇರಿ ಉದ್ಘಾಟನೆ

160 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭ

ಮಂಗಳೂರಿನ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೂತನ ಕಚೇರಿ ನವೆಂಬರ್ 28ರಂದು ಶುಕ್ರವಾರ ಉದ್ಘಾಟನೆಗೊಂಡಿತು. ಸಚಿವ ದಿನೇಶ್ ಗುಂಡೂರಾವ್ ಅವರು ಕಚೇರಿ ಉದ್ಘಾಟಿಸಿ ಮಾತನಾಡಿದ ವೇಳೆ, “ಈ ಕಚೇರಿ ಸಾರ್ವಜನಿಕರ ಕೆಲಸಗಳನ್ನು ಸ್ಪಷ್ಟವಾಗಿ ನಿರ್ವಹಿಸಲು ಸಹಕಾರಿ ಆಗಲಿದೆ. ನಾನು ವಾರದಲ್ಲಿ ಎಷ್ಟು ದಿನ ಕಚೇರಿಯಲ್ಲಿ ಇರಬಲ್ಲೆ ಎನ್ನುವುದು ಖಚಿತವಿಲ್ಲದಿದ್ದರೂ, ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ದಿನಗಳಲ್ಲಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಜನರು ತಮ್ಮ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿ ಕೊಂಡುಕೊಳ್ಳಬಹುದು,” ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಸೇರಿದಂತೆ ಕಾಂಗ್ರೆಸ್ಸಿನ ಅನೇಕ ಮುಖಂಡರು ಉಪಸ್ಥಿತರಿದ್ದರು.

160 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ಆರಂಭ:

ಮಂಗಳೂರಿನ ನಗರ ಪಾಲಿಕೆ ವ್ಯಾಪ್ತಿಯೊಳಗೆ ಒಳರಸ್ತೆಗಳ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಳಿಗೆ 160 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳೊಳಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.

ಸುರತ್ಕಲ್ ಎಸ್‌ಟಿಪಿ ಮೇಲ್ದರ್ಜೆಗೇರಿಕೆ – ನಂದಿನಿ ನದಿ ಮಾಲಿನ್ಯಕ್ಕೆ ಪರಿಹಾರ ಕ್ರಮ:

ಸುರತ್ಕಲ್‌ನ ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹಳೆಯ ತಂತ್ರಜ್ಞಾನದಿಂದ ಕೂಡಿದ್ದು, ಹಲವು ನ್ಯೂನ್ಯತೆಗಳಿವೆ. ಅದನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ನಂದಿನಿ ನದಿ ನೀರು ಮಾಲಿನ್ಯವಾಗುತ್ತಿರುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಎಸ್‌ಟಿಪಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವಾದುದರಿಂದ ಸಮಸ್ಯೆ ಉಂಟಾಗಿದೆ. ವಿದ್ಯುತ್ ಕಡಿತವಾದಾಗ ಜನರೇಟರ್ ಇಲ್ಲದಿರುವುದರಿಂದ ಘಟಕದ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಹೊಸ ಜನರೇಟರ್ ಖರೀದಿಸಲು ಟೆಂಡರ್ ಕರೆಯಲಾಗಿದ್ದು, ಫೆಬ್ರವರಿಯೊಳಗೆ ಬರಲಿದೆ. ಅಲ್ಲಿಯವರೆಗೆ ತಾತ್ಕಾಲಿಕ ಜನರೇಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ:

ಸಿಎಂ ಬದಲಾವಣೆಯ ಕುರಿತು ಕೇಳಿದ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, “ಎಐಸಿಸಿ ಅಧ್ಯಕ್ಷರು ಈಗಾಗಲೇ ಹೇಳಿಕೆ ನೀಡಿ, ವಿಷಯವನ್ನು ಸುಸೂತ್ರವಾಗಿ ಬಗೆಹರಿಸಲಾಗುವುದು ಎಂದಿದ್ದಾರೆ. ಅವರ ಹೇಳಿಕೆಯ ನಂತರ ನನಗೆ ಹೇಳುವಷ್ಟು ಏನೂ ಇಲ್ಲ,” ಎಂದು ಹೇಳಿದರು.

ಕರಾವಳಿ ಉತ್ಸವದ ಸಿದ್ಧತೆ:

ಡಿಸೆಂಬರ್ 20ರಿಂದ ಆರಂಭವಾಗಲಿರುವ ಕರಾವಳಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

You may also like

News

ತ್ರಿಷಾ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ 28ನೇ ಸಂಸ್ಥಾಪನಾ ದಿನಾಚರಣೆ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಸಂಭ್ರಮ ಹಾಗೂ ವೈಭವದಿಂದ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವಾಗತ
News

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ‘ನರ್ಚರ್ 2026’ – ಮಕ್ಕಳ ರಾಷ್ಟ್ರೀಯ ವೈದ್ಯಕೀಯ ವಿಚಾರ ಸಂಕಿರಣ

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ನರ್ಚರ್ 2026 – ಮಕ್ಕಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು

You cannot copy content of this page