December 11, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೈಬರಹದಲ್ಲಿ ಕೊಂಕಣಿ ಬೈಬಲ್ ಬರೆದು ದಾಖಲೆ ನಿರ್ಮಿಸಿದ ಅಲಂಗಾರ್ ಚರ್ಚ್ ನ ಹೆಲೆನ್ ಲೋಬೊ

ಸಮುದಾಯಕ್ಕೆ ಪ್ರೇರಣೆಯ ಹೊಸ ದೀಪ

ಬಿಷಪ್ ಅವರ ಪ್ರಶ್ನೆಯಿಂದ ಹುಟ್ಟಿದ ಪ್ರೇರಣೆ

ಮಂಗಳೂರು ಧರ್ಮಕ್ಷೇತ್ರದ ಅಲಂಗಾರ್ ಚರ್ಚ್ ನ ಹೆಲೆನ್ ಲೋಬೊ ಅವರು ತಮ್ಮ ಒಲವು, ಭಕ್ತಿ ಮತ್ತು ತಾಳ್ಮೆಯ ಮೂಲಕ ಇಡೀ ಕ್ರೈಸ್ತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕೇವಲ 11 ತಿಂಗಳ ಅವಧಿಯಲ್ಲಿ ಪವಿತ್ರ ಬೈಬಲ್ ನ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆದ ಅವರು ಅಲಂಗಾರು ಸಮುದಾಯದ ನಂಬಿಕೆಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವುದು ವಿಶೇಷ.

ಬಿಷಪ್ ಅವರ ಪ್ರಶ್ನೆಯಿಂದ ಹುಟ್ಟಿದ ಪ್ರೇರಣೆ:

2022ರಲ್ಲಿ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅಲಂಗಾರ್ ಚರ್ಚ್ ಗೆ ಅಧಿಕೃತ ಭೇಟಿ ನೀಡಿದಾಗ, “ಬೈಬಲ್ ಓದುತ್ತೀರಾ?” ಎಂಬ ಬಿಷಪ್ ಪ್ರಶ್ನೆಗೆ ಅನೇಕರಿಂದ ಪ್ರತಿಕ್ರಿಯೆ ಸಿಕ್ಕಿತು. ಆದರೆ “ಬೈಬಲ್ ಬರೆದಿದ್ದೀರಾ?” ಎನ್ನುವ ಪ್ರಶ್ನೆ ಕೇಳಿದಾಗ ಕೇವಲ ಮೌನವೇ ಉತ್ತರವಾಗಿತ್ತು. ಈ ನಿಶ್ಶಬ್ದವೇ ಹೆಲೆನ್ ಅವರ ಮನದಲ್ಲಿ ಹೊಸ ವಿಚಾರದ ಬಿತ್ತನೆ ಮಾಡಿತು. “ನಾನೇಕೆ ಇಡೀ ಬೈಬಲ್ ಬರೆಯಬಾರದು?”—ಎಂಬ ಪ್ರಶ್ನೆ ಹೆಲೆನ್ ಅವರ ಹೃದಯದಲ್ಲಿ ಬೇರು ಬಿತ್ತಿ, ಅದೇ ದಿನದಿಂದಲೇ ಈ ಪವಿತ್ರ ಪ್ರಯತ್ನಕ್ಕೆ ಚಾಲನೆ ದೊರಕಿಸಿದರು.

ದಿನಕ್ಕೆ 50 ಪುಟಗಳ ಶ್ರಮ – ಏಳು ತಿಂಗಳಲ್ಲಿ ಹೊಸ ಒಡಂಬಡಿಕೆ ಪೂರ್ಣ:

ಹೂವಿನ ಉದ್ಯಮದಲ್ಲಿ ಬೆಳಿಗ್ಗೆ 9ರಿಂದ 11 ಗಂತೆಯ ತನಕ ಕೆಲಸವನ್ನು ಮುಗಿಸಿ, ನಂತರ ಕೊಂಕಣಿ ಭಾಷೆಯಲ್ಲಿ ಬೈಬಲ್ ಬರೆಯುವ ಕೆಲಸವನ್ನು ದಿನಚರಿಯ ಭಾಗವನ್ನಾಗಿ ಮಾಡಿಕೊಂಡ ಹೆಲೆನ್ ಅವರು ಆರಂಭದಲ್ಲಿ ನಿಧಾನಗತಿಯಲ್ಲಿ ಬರೆದರೂ, ನಂತರ ದಿನಕ್ಕೆ 50 ಪುಟಗಳ ವೇಗ ಸಾಧಿಸಿದರು.ಈ ಕಠಿನ ಪರಿಶ್ರಮದಿಂದ ಕೇವಲ ಏಳು ತಿಂಗಳಲ್ಲೇ ಹೊಸ ಒಡಂಬಡಿಕೆ ಪೂರ್ಣಗೊಂಡಿತು. ಧರ್ಮಗುರುಗಳಿಗೂ ಈ ಸಾಧನೆ ದೊಡ್ಡ ಆಶ್ಚರ್ಯ ತಂದಿತು.

ಸ್ಪರ್ಧೆ ಕೊಟ್ಟ ಮತ್ತೊಂದು ಪ್ರೇರಣೆ – 11 ತಿಂಗಳಲ್ಲಿ ಸಂಪೂರ್ಣ ಬೈಬಲ್:

2023ರಲ್ಲಿ ಅಲಂಗಾರ್ ಧರ್ಮಕೇಂದ್ರದ ಹಿರಿಯರಿಗಾಗಿ ಕೈಬರಹದ ಬೈಬಲ್ ಸ್ಪರ್ಧೆ ಘೋಷಿಸಿತು. ಒಂದು ವರ್ಷದೊಳಗೆ ಇಡೀ ಬೈಬಲ್ ಬರಹದ ಮೂಲಕ ಪೂರ್ಣಗೊಳಿಸುವುದು ಅದರ ಷರತ್ತು. ಈ ಸ್ಪರ್ಧೆಯೇ ಹೆಲೆನ್ ಅವರಿಗೆ ಮತ್ತೊಂದು ಗುರಿ ನೀಡಿತು. ಬೆಳಗ್ಗೆ 3 ಗಂಟೆಗೆ ಎದ್ದು ಮಗನಿಗೆ ಚಹಾ ನೀಡಿ, ಪ್ರಾರ್ಥನೆ, ಮನೆ ಕೆಲಸಗಳ ನಡುವೆ ಪ್ರತಿದಿನ ಬರೆಯಬೇಕಾದ ಪುಟಗಳನ್ನು ನಿಗದಿ ಮಾಡಿ, ಅದನ್ನು ಸಾಧಿಸುವಲ್ಲಿ ನಿರಂತರ ಶ್ರಮ ಪಟ್ಟ ಅವರು 11 ತಿಂಗಳಲ್ಲೇ ಹಳೆಯ ಹಾಗೂ ಹೊಸ ಒಡಂಬಡಿಕೆಗಳನ್ನು ಪೂರ್ಣಗೊಳಿಸಿದರು.

ಕುಟುಂಬದ ನಿಸ್ವಾರ್ಥ ಬೆಂಬಲ :

ಈ ಪ್ರಯಾಣದಲ್ಲಿ ಹೆಲೆನ್ ಅವರ ಗಂಡ ಚಹಾ–ಊಟ ತಯಾರಿಸುವಲ್ಲಿ ನೆರವಾದರೆ, ಮಗಳು ಬೇಕಾದ ಪೆನ್ನುಗಳನ್ನು ತಂದುಕೊಟ್ಟಳು. ಮನೆ ಕೆಲಸಗಳನ್ನು ಮಕ್ಕಳು ಹಂಚಿಕೊಂಡರು. ಬರೆಯುತ್ತ ಕೈ ನೋವಾದಾಗ ಹೆಲೆನ್ ಸ್ವಲ್ಪ ಮನೆ ಕೆಲಸ ಮಾಡಿ, ಮತ್ತೆ ಬರವಣಿಗೆಗೆ ಹಿಂದಿರುಗುತ್ತಿದ್ದಿದ್ದರು. ಇದು ಅವರ ನಿಷ್ಠೆಯ ಪ್ರಮಾಣ. ಗಂಡ–ಮಕ್ಕಳ ಬೆಂಬಲದಿಂದಲೇ ಬರೆಯುವ ಪ್ರಯತ್ನದ ಪ್ರತಿಯೊಂದು ಹಂತವೂ ಸುಗಮವಾಗಿತ್ತು.

ಹೆಸರಿನ ಕಠಿಣತೆ, ಬರವಣಿಗೆಯಲ್ಲಿ ಜಾಗ್ರತೆ:

ಹಳೆಯ ಒಡಂಬಡಿಕೆಯ ಗಹನ ಹೆಸರುಗಳನ್ನು ಬರೆಯುವಲ್ಲಿ ಹೆಲೆನ್ ಅವರಿಗೆ ಹೆಚ್ಚಿನ ಕಷ್ಟವಾಗುತ್ತಿತ್ತು. ಹಲವು ಬಾರಿ ಪರಿಶೀಲಿಸಿ ಮತ್ತೆ ಮತ್ತೆ ಬರೆಯಬೇಕಾಗುತ್ತಿತ್ತು. ಹೊಸ ಒಡಂಬಡಿಕೆಯಲ್ಲೂ ಪ್ರತಿಯೊಂದು ಪುಟವೂ ತಪ್ಪಿಲ್ಲದೇ ಬರೆಯುವ ಜಾಗ್ರತೆ ಅವರಲ್ಲಿ ಮಿತಿಮೀರಿ ಕಂಡುಬಂತು. ಜೋಬನ ದುಃಖಗಳು—ಆದರೂ ಅವನ ನಂಬಿಕೆ—ಇಂತಹ ಭಾಗಗಳನ್ನು ಬರೆಯುವಾಗ ಕೆಲವೊಮ್ಮೆ ಭಾವನೆಗೆ ಮಡುವಾಗುತ್ತಿತ್ತಂತೆ; ಇದು ಅವರ ಭಕ್ತಿಯ ಮತ್ತೊಂದು ಮುಖ.

ಸಮುದಾಯದ ಗೌರವ – ರೂಪಾಯಿ 11,111 ಬಹುಮಾನ:

ಅಲಂಗಾರ್ ಚರ್ಚ್ ನಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಕೈಬರಹದಲ್ಲಿ ಬರೆದ ಏಕೈಕ ವ್ಯಕ್ತಿಯಾಗಿ ಹೆಲೆನ್ ಲೋಬೊ ಆಯ್ಕೆಗೊಂಡರು. ಅವರಿಗೆ ಪ್ರಥಮ ಬಹುಮಾನವಾಗಿ ರೂಪಾಯಿ 11,111 ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸ್ಪರ್ಧೆಯನ್ನು ಆಯೋಜಿಸಿದ್ದ ಅಂದಿನ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿಸೋಜ ಅವರಿಗೆ ಹೆಲೆನ್ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. ಅವರಿಗೆ ವಿಶ್ವದಾಖಲೆ ಮಾಡುವ ಆಸಕ್ತಿ ಇರಲಿಲ್ಲ; ಸಮುದಾಯದ ನಂಬಿಕೆಯನ್ನು ಗಟ್ಟಿಗೊಳಿಸುವುದೇ ಪ್ರಮುಖ ಗುರಿ ಆಗಿತ್ತು.

ಸಮುದಾಯಕ್ಕೆ ಹೆಲೆನ್ ನೀಡಿದ ಸ್ಪೂರ್ತಿದಾಯಕ ಸಂದೇಶ:

ಹೆಲೆನ್ ಲೋಬೊ ಅವರ ಮಾತುಗಳಲ್ಲಿ ಜೀವನದ ನಂಬಿಕೆಯ ಸಾರ ಹೀಗಿದೆ— “ದೇವರ ವಾಕ್ಯ ಓದಿ, ಬರೆದು, ಪಾಲಿಸಿದರೆ ಕುಟುಂಬದಲ್ಲಿ ಸಮಾಧಾನ ಬರುತ್ತದೆ. ಬೈಬಲ್‌ನಿಂದ ನಮ್ಮ ಮನೆ ಬೆಳಗಿದೆ. ಹೆಚ್ಚಿನ ವಿದ್ಯಾಭ್ಯಾಸ ಇರದಿದ್ದರೂ ನಮ್ಮ ಮಕ್ಕಳು ಒಳ್ಳೆಯ ಸ್ಥಾನ ಗಳಿಸಿದ್ದಾರೆ. ಅದು ದೇವರ ವಚನದ ಕೃಪೆ. ಆದ್ದರಿಂದ ಎಲ್ಲರೂ ಬೈಬಲ್ ಓದಿ, ಬರೆದು, ಬದುಕಿನಲ್ಲಿ ಅನುಸರಿಸಿ” ಎಂದು ಕರೆ ನೀಡಿದರು.

ಹೆಲೆನ್ ಲೋಬೊ ಅವರ ಕೈಬರಹದ ಈ ಪವಿತ್ರ ಯಾತ್ರೆ ಅಲಂಗಾರ್ ಚರ್ಚ್ ಸಮುದಾಯಕ್ಕೆ ಭಕ್ತಿ, ಶ್ರಮ ಮತ್ತು ಒಗ್ಗಟ್ಟಿನ ಜೀವಂತ ಮಾದರಿ. ಇಂತಹ ವ್ಯಕ್ತಿಗಳೇ ಸಮಾಜಕ್ಕೆ ನಂಬಿಕೆಯ ಶಕ್ತಿ, ಹೊಸ ದಾರಿದೀಪ.

ಹೆಲೆನ್ ಅವರ ಈ ವಿಷೇಶ ಸಾಧನೆಗೆ ಅಲಂಗಾರ್ ಚರ್ಚ್ ನ ಪ್ರಸ್ತುತ ಪ್ರಧಾನ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ, ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಡ್ವರ್ಡ್ ಸೆರಾವೊ, ಕಾರ್ಯದರ್ಶಿ ಲಾರೆನ್ಸ್ ಅನಿಲ್ ಡಿಕುನ್ಹಾ, ಆಯೋಗಗಳ ಸಂಯೋಜಕ ರಾಜೇಶ್ ಡಿಸೋಜ ಕಡಲಕೆರೆ, ಎಲ್ಲಾ ಭಕ್ತಾಧಿಗಳು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮೂಡಬಿದ್ರೆ ವಲಯದ ಅಧ್ಯಕ್ಷ ಆಲ್ವಿನ್ ರೊಡ್ರಿಗಸ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

You may also like

News

ಮಂಗಳೂರಿನಲ್ಲಿ ಪೊಲೀಸ್‌ ಡ್ರಗ್‌ ಬೇಟೆ – 5500 ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ 20 ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಪೊಲೀಸರ ವಿನಂತಿಗೆ ಸ್ಪಂದಿಸಿ ಶಾಲೆ–ಕಾಲೇಜುಗಳು ಸ್ವಯಂಪ್ರೇರಿತವಾಗಿ ಪರೀಕ್ಷೆ ನಡೆಸಿದ್ದು ಶ್ಲಾಘನೀಯ ಪಾಸಿಟಿವ್‌ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಪ್ರಾರಂಭಿಸಿದ್ದು ಅಧಿಕಾರಿಗಳ ನಿರಂತರ ನಿಗಾ ಮಂಗಳೂರು ನಗರದಲ್ಲಿ ಶಾಲಾ ಮತ್ತು ಕಾಲೇಜು
News

ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರಿಸ್ಮಸ್ ನಕ್ಷತ್ರ — ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್ SMYM ಯುವಕರಿಂದ ಅದ್ಭುತ ಸೃಜನಶೀಲತೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರಕ್ಕೆ ಸೇರಿದ SMYM ಯುವಕರು ವಿಶಿಷ್ಟ ಸಾಧನೆ ಮಾಡಿ ದಾಖಲೆ ಬರಹಕ್ಕೆ ತಮ್ಮ ಹೆಸರನ್ನು

You cannot copy content of this page