September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

 “ನೈಸರ್ಗಿಕ ಕೃಷಿಯಿಂದ ಆರೋಗ್ಯಯುತ ಸಮಾಜ ನಿರ್ಮಾಣ” – ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ

ದಕ್ಷಿಣ ಕನ್ನಡ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಐದು ದಿನಗಳ ನೈಸರ್ಗಿಕ ಕೃಷಿ ತರಬೇತಿ ಆರಂಭ

ತರಬೇತಿ ಕೈಪಿಡಿಯನ್ನು ಬಿಡುಗಡೆ ಗೊಳಿಸಿದ  ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ

ನೈಸರ್ಗಿಕ ವಿಧಾನದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ರಾಸಾಯನಿಕ ಮುಕ್ತ ತರಕಾರಿ ಮತ್ತು ಬೆಳೆಗಳು ದೊರೆಯುತ್ತವೆ. ಇದರಿಂದ ಜನರು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿನ್ನೆ ಡಿಸೆಂಬರ್ 9ರಂದು ಮಂಗಳವಾರ ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಭಾರತ ಸರ್ಕಾರ), ಕೃಷಿ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನೈಸರ್ಗಿಕ ಕೃಷಿ ಕುರಿತ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ನೀತಿಯಂತೆ ನೈಸರ್ಗಿಕ ಕೃಷಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಸಾಂಪ್ರದಾಯಿಕ ಹಾಗೂ ಜಾನುವಾರು ಆಧಾರಿತ ಕೃಷಿ ಪದ್ಧತಿಗೆ ರೈತರನ್ನು ಪ್ರೇರೇಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2025 ಫೆಬ್ರವರಿಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಮಣ್ಣಿನ ಆರೋಗ್ಯ ಸಂರಕ್ಷಣೆ, ನೀರಿನ ಗುಣಮಟ್ಟ ಪರಿಶೀಲನೆ ಮತ್ತು ಪ್ರಾಕೃತಿಕವಾಗಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಕೃಷಿ ನಡೆಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದರು.

ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆ ಜಾರಿಯಲ್ಲಿದ್ದು, ರೈತರ ಕೃಷಿ ಪರಿಕರ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಯಾವುದೇ ಕ್ರಿಮಿನಾಶಕ ಹಾಗೂ ರಾಸಾಯನಿಕ ರಸಗೊಬ್ಬರಗಳ ಬಳಕೆ ಇಲ್ಲದೆ ಸಾವಯವ ರೀತಿಯಲ್ಲಿ ಕೃಷಿ ನಡೆಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಉಪ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಮಣ್ಣು, ನೀರು, ಗಾಳಿ ಇವುಗಳು ಕೃಷಿಗೆ ಪೂರಕವಾದ ನೈಸರ್ಗಿಕ ಅಂಶಗಳಾಗಿವೆ. ಪರಿಸರ ಸ್ನೇಹಿ ಕೃಷಿ ಚಟುವಟಿಕೆಗಳು, ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವುದು ಮತ್ತು ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ ಎಂದರು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ. ರಮೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಸಲು ಮತ್ತು ಕೃಷಿಕರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಕೃಷಿ ವಿಜ್ಞಾನ ಕೇಂದ್ರ ಶ್ರಮಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಅವರು ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ಸ್ವಾಗತಿಸಿದರು. ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ವಂದಿಸಿದರು.

You may also like

News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು
News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ

You cannot copy content of this page