August 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಳುನಾಡಿನ ದೈವಾರಾಧನೆ ಸಮುದಾಯಗಳ ಸಂಕಷ್ಟ ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿ – ಶಾಸಕ ವೇದವ್ಯಾಸ ಕಾಮತ್ ಆಗ್ರಹ

ತುಳುನಾಡಿನ ದೈವಾರಾಧನೆಗೆ ಸಂಬಂಧಿಸಿದ ಅನೇಕ ಸಮುದಾಯಗಳು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದರಿಂದ ತಕ್ಷಣವೇ ಸರ್ಕಾರ ನೆರವಿಗೆ ಬರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಪರಿಶಿಷ್ಟ ಜಾತಿಗೆ ಸೇರಿದ ದೈವ ನರ್ತಕರಾದ ನಲಿಕೆ, ಪರವ, ಪಂಬದ, ಪಾಣರ ಸೇರಿದಂತೆ ಹಲವು ವರ್ಗಗಳು, ಹಾಗೆಯೇ ದೈವ ಪಾತ್ರಿಗಳಾದ ಮುಂಡಾಲ, ಆದಿ ದ್ರಾವಿಡ, ಮುಗೇರ, ಬಾಕುಡ, ಸಮಗಾರ ಜೊತೆಗೆ ಜೈನ, ಬಂಟ, ಬಿಲ್ಲವ ಸಮುದಾಯದವರೂ ದೈವ ಸೇವೆಯಲ್ಲಿ ನಿರತರಾಗಿದ್ದಾರೆ. ಇದಲ್ಲದೆ ದೈವದ ಚಾಕರಿಯಲ್ಲಿ ತೊಡಗಿರುವ ಅನೇಕ ಇತರ ವರ್ಗಗಳೂ ಇದ್ದಾರೆ ಎಂದು ಅವರು ಹೇಳಿದರು.

ಸರ್ಕಾರವು ಈ ಸಮುದಾಯಗಳ ವೈಶಿಷ್ಟ್ಯವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು, ಅವರನ್ನು ಸಾಹಿತಿ, ಕಲಾವಿದ, ಲಲಿತಕಲೆ, ಶಿಲ್ಪಕಲೆ ಮುಂತಾದ ಶ್ರೇಣಿಗಳಲ್ಲಿ ಸೇರಿಸುವ ಬದಲಾಗಿ ಸ್ವತಂತ್ರವಾಗಿ ಗುರುತಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕಾಮತ್ ತಿಳಿಸಿದರು. 40 ವರ್ಷಕ್ಕಿಂತ ಕಡಿಮೆ ಹಾಗೂ 58 ವರ್ಷಕ್ಕಿಂತ ಮೇಲ್ಪಟ್ಟವರೂ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಎಲ್ಲರಿಗೂ ಅನುವಾಗುವ ಮಾನದಂಡಗಳನ್ನು ರೂಪಿಸಬೇಕು ಎಂದು ಬೇಡಿಕೆ ಇಟ್ಟುಕೊಂಡರು.

ನಲಿಕೆ ಸಮುದಾಯದ ಮಾತ್ರ ಮೂರು ಜನರಿಗೆ ಮಾಸಾಶನ ನೀಡಲಾಗುತ್ತಿದೆ ಎಂಬ ಸರಕಾರದ ಉತ್ತರವನ್ನು ಉಲ್ಲೇಖಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಾರಾಧನೆ ಚಾಕರಿಯಲ್ಲಿ ತೊಡಗಿರುವವರ ಸಂಖ್ಯೆ ಬಹಳ ಹೆಚ್ಚಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಅವರಿಗೆ ಪಿಎಫ್, ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದಿರುವುದನ್ನು ಉಲ್ಲೇಖಿಸಿ, ಅವರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದು, ಪ್ರತಿ ತಿಂಗಳು ರೂಪಾಯಿ 2,500 ಮಾಸಾಶನ ನೀಡುವುದು, ಬೇರೆ ರಾಜ್ಯಗಳಿಂದ ವಿವಾಹವಾಗಿ ಬಂದವರಿಗೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ನಡೆಯುತ್ತಿರುವ ತಾರತಮ್ಯವನ್ನು ನಿವಾರಿಸುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಅವರು ಒತ್ತಾಯಿಸಿದರು.

You may also like

News

ಸಮಾಜಮುಖಿ ಸೇವೆ – ದಿವಂಗತ ಸಹೋದರನ ಸ್ಮರಣಾರ್ಥ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ಕೊಡುಗೆ ನೀಡಿದ ಬಶೀರ್ ಬಂಟ್ವಾಳ

ಮಾನವೀಯ ಸೇವೆಗೆ ಯಾವುದೇ ಜಾತಿ, ಮತ ಅಥವಾ ಧರ್ಮದ ಭೇದವಿಲ್ಲ ಎಂಬುದನ್ನು ಸಾರುವಂತೆ, ದುಬೈ ಅಸ್ತರ್ ಆಸ್ಪತ್ರೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ ಅವರು ತಮ್ಮ
News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session

You cannot copy content of this page