August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೌಡಿಶೀಟರ್‌ಗಳಿಗೂ ಘನತೆಯಿಂದ ಬದುಕುವ ಹಕ್ಕು: ಠಾಣೆಗೆ ಕರೆಸಲು ಪೂರ್ವಮಾಹಿತಿ ಕಡ್ಡಾಯ – ಹೈಕೋರ್ಟ್ ಮಹತ್ವದ ತೀರ್ಪು

ರೌಡಿಶೀಟರ್‌ಗಳಿಗೂ ಮಾನವ ಘನತೆಯೊಂದಿಗೆ ಬದುಕುವ ಮೂಲಭೂತ ಹಕ್ಕು ಇದೆ. ಅವರು ತಮ್ಮ ಹಿಂದಿನ ಜೀವನವನ್ನು ಮರೆತು ಸಮಾಜದ ಮುಖ್ಯವಾಹಿನಿಗೆ ಮರಳಲು ಅವಕಾಶ ಕಲ್ಪಿಸಬೇಕು. ಕೇವಲ ರೌಡಿ ಶೀಟ್‌ನಲ್ಲಿ ಹೆಸರು ಇದೆ ಎಂಬ ಕಾರಣಕ್ಕೆ ಪೊಲೀಸರು ಇಚ್ಛೆಯಂತೆ ಠಾಣೆಗೆ ಕರೆಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್” ಪ್ರಕರಣದಲ್ಲಿ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಡಿಸೆಂಬರ್ 4ರಂದು ಗುರುವಾರ ಈ ತೀರ್ಪು ಪ್ರಕಟಿಸಿದೆ. ಅಗತ್ಯವಿಲ್ಲದ ಸಂದರ್ಭಗಳಲ್ಲಿ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಯಲ್ಲಿ ಸುದೀರ್ಘ ಕಾಲ ಕಾಯಿಸುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರೌಡಿಶೀಟರ್‌ಗಳನ್ನು ಠಾಣೆಗೆ ಕರೆಸಬೇಕಾದ ಅವಶ್ಯಕತೆ ಇದ್ದರೆ, ಮೊದಲು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೂರ್ವಮಾಹಿತಿ ನೀಡಬೇಕು. ಈ ಸೂಚನೆಗೆ ಸ್ಪಂದಿಸದೆ ಅಥವಾ ಠಾಣೆಗೆ ಹಾಜರಾಗದೆ ಇದ್ದಲ್ಲಿ ಮಾತ್ರ ಪೊಲೀಸರು ಅವರ ಮನೆಗೆ ಅಥವಾ ಇರುವ ಸ್ಥಳಕ್ಕೆ ತೆರಳಿ ಕರೆತರಬಹುದು ಎಂದು ನ್ಯಾಯಪೀಠ ಆದೇಶಿಸಿದೆ.

ರೌಡಿಶೀಟರ್‌ಗಳು ತಮ್ಮ ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿರಬೇಕು. ಅಗತ್ಯ ಸಂದರ್ಭಗಳಲ್ಲಿ ಪೊಲೀಸರು ಮೊಬೈಲ್ ಸಂದೇಶದ ಮೂಲಕ ಸೂಚಿಸಿದರೆ, ಅವರು ಠಾಣೆಗೆ ಹಾಜರಾಗಬೇಕು. ಆದರೆ ಸೂಚನೆಗೂ ಸ್ಪಂದಿಸದಿದ್ದಲ್ಲಿ ಮಾತ್ರ ಮನೆಗೆ ಹೋಗಿ ಕರೆತರಲು ಪೊಲೀಸರಿಗೆ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಅದೇ ವೇಳೆ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಈ ಆದೇಶದ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ 6,500ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದಾರೆ. ಅವರಿಗೂ ಘನತೆಯಿಂದ ಬದುಕುವ ಹಕ್ಕು ಇರುವುದರ ಜೊತೆಗೆ, ತಮ್ಮ ಹಿಂದಿನ ಇತಿಹಾಸವನ್ನು ಮರೆತು ಬದಲಾಗುವ ಅವಕಾಶ ನೀಡಬೇಕು ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವ ವಿಚಾರದಲ್ಲಿ ಪೊಲೀಸರ ಕ್ರಮ ಪ್ರಶ್ನಿಸಿ, ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಹೊಸ ಪ್ರಕ್ರಿಯೆಯನ್ನು ನಿಗದಿಪಡಿಸಿ ರಾಜ್ಯ ಪೊಲೀಸರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿದೆ.

ಹಿಂದೆ ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದ ವೇಳೆ ಸೈಲೆಂಟ್ ಸುನೀಲ್ ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನು ಪ್ರಶ್ನಿಸಿ ಸುನೀಲ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page