July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ಅಗತ್ಯ” – ಎಸಿಪಿ ನಜ್ಮಾ ಫಾರೂಕಿ

ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳ ಸ್ವರೂಪದಲ್ಲಿ ಬದಲಾವಣೆ ಕಂಡುಬರುತ್ತಿದ್ದು, ಯುವಜನತೆ ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರ ಸೇರಿದಂತೆ ಹಲವು ಅಪರಾಧಗಳಲ್ಲಿ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ.

ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317-ಡಿ ವತಿಯಿಂದ ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ಇಂದು ಡಿಸೆಂಬರ್ 13ರಂದು ಶನಿವಾರ ನಡೆದ “ಮಾನವ ಹಕ್ಕುಗಳು” ಕುರಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆನ್‌ಲೈನ್ ವಂಚನೆಗೆ ಒಳಗಾಗಿ ಅನೇಕರು ಹಣ ಮಾತ್ರವಲ್ಲದೆ ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಜೊತೆಗೆ ಕಾನೂನು, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳುವಳಿಕೆ ಅಗತ್ಯವಿದೆ ಎಂದು ಹೇಳಿದರು.

ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್‌ಮೇಲ್, ಯುಪಿಐ ಸ್ಕ್ಯಾನ್ ಹೆಸರಿನಲ್ಲಿ ವಂಚನೆ, ನಕಲಿ ಖಾತೆ ತೆರದು ಹಣ ಬೇಡುವುದು, ಸೆಲೆಬ್ರಿಟಿಗಳ ಫೋಟೋ ಮಾರ್ಫ್ ಮಾಡಿ ಮೋಸ ಮಾಡುವುದು, ಎಪಿಕೆ ಫೈಲ್‌ಗಳ ಮೂಲಕ ವಂಚನೆ, ಕೆವೈಸಿ ಹಾಗೂ ಆಧಾರ್ ಅಪ್ಡೇಟ್ ಹೆಸರಿನಲ್ಲಿ ನಡೆಯುವ ವಂಚನೆಗಳು ಹೆಚ್ಚಾಗಿವೆ. ಹಣ ಡಬಲ್ ಆಗುತ್ತದೆ ಎಂದು ಹೂಡಿಕೆ ಮಾಡಲು ಪ್ರಲೋಭನೆ ನೀಡುವ ಮೋಸಗಳೂ ಸಾಮಾನ್ಯವಾಗಿವೆ. ಕೆವೈಸಿ ಅಪ್ಡೇಟ್ ಅಥವಾ OTP ಕೇಳಿದರೆ ನೀಡಬಾರದು. ಕಸ್ಟಮ್ಸ್ ಹೆಸರಿನಲ್ಲಿ ಭಯಪಡಿಸಿ ಹಣ ಕೇಳಿದರೆ ಕೊಡಬಾರದು. ಡಿಜಿಟಲ್ ಅರೆಸ್ಟ್ ಎಂಬುದೇ ಕಾನೂನಿನಲ್ಲಿ ಇಲ್ಲ ಎಂದು ಎಸಿಪಿ ಸ್ಪಷ್ಟಪಡಿಸಿದರು.

ಹಣ ಕಳೆದುಕೊಂಡವರು ‘ಗೋಲ್ಡನ್ ಅವರ್’ನಲ್ಲಿ 1930ಗೆ ಕರೆ ಮಾಡಿದರೆ ಹಣ ವಾಪಸ್ ಪಡೆಯುವ ಸಾಧ್ಯತೆ ಇರುತ್ತದೆ. ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಈ ವರ್ಷ ನಷ್ಟವಾದ ಹಣದಲ್ಲಿ ಅತಿ ಕಡಿಮೆ ಮೊತ್ತವೇ ಮರುಪಡೆಯಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು. ಕುತೂಹಲಕ್ಕೆ ಮಾಡಿದ ಅಪರಾಧವೂ ಅಪರಾಧವೇ ಆಗುತ್ತದೆ. ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಕಾಲೇಜುಗಳಲ್ಲಿ ರಾಂಡಂ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸ್ನೇಹಿತರು ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಅವರನ್ನು ಈ ದುಶ್ಚಟದಿಂದ ಹೊರತರುವುದು ಸಾಧ್ಯ ಎಂದು ಹೇಳಿದರು. ಇದೇ ವೇಳೆ ಮಕ್ಕಳಿಗೆ ಮಾದಕ ವಸ್ತುಗಳನ್ನು ಮುಟ್ಟುವುದಿಲ್ಲ ಎಂಬ ಪ್ರತಿಜ್ಞಾ ವಿಧಿಯನ್ನೂ ಬೋಧಿಸಿದರು.

ಪ್ರಧಾನ ಭಾಷಣ ಮಾಡಿದ ಅಡ್ವಕೇಟ್ ಉದಯಾನಂದ ಕೆ., ಮಾನವ ಹಕ್ಕುಗಳ ಉಲ್ಲಂಘನೆಯೇ ಅನೇಕ ಯುದ್ಧಗಳಿಗೆ ಕಾರಣವಾಗಿದೆ. ವಿನಾಶಕಾರಿ ಅಸ್ತ್ರಗಳನ್ನು ತಯಾರಿಸುವ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಐನ್ಸ್ಟೀನ್ ಹೇಳಿದಂತೆ ಮೂರನೇ ಮಹಾಯುದ್ಧ ನಡೆದರೆ ನಾಲ್ಕನೇ ಯುದ್ಧ ನಡೆಯುವುದಿಲ್ಲ, ಏಕೆಂದರೆ ಮೂರನೇ ಯುದ್ಧದಲ್ಲಿಯೇ ಭೂಮಿ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಬಿ.ಪಿ. ಆಚಾರ್ ರಚಿಸಿದ ಮಾನವ ಹಕ್ಕುಗಳ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಸಂಯೋಜಕ ಎಡ್ವಿನ್ ವಾಲ್ಟರ್ ಅತಿಥಿಗಳನ್ನು ಸ್ವಾಗತಿಸಿದರು. ಎಂ.ಎಚ್. ಕರುಣಾಕರ್, ಬಿ.ಎಸ್. ರೈ, ಕೆ. ಚಂದ್ರಮೋಹನ್ ರಾವ್, ಪ್ರಜ್ವಲ್ ಯು.ಎಸ್., ಎಂ.ಟಿ. ರಾಜಾ, ಜ್ಯೋತಿ ಎಸ್. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಶಾ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page