August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

85 ವರ್ಷದ ವೃದ್ಧೆ ಮನೆಗೆ ನುಗ್ಗಿ ದರೋಡೆ – ಮೂವರು ಆರೋಪಿಗಳ ಬಂಧನ

ಸುರತ್ಕಲ್ ಪೊಲೀಸರಿಂದ ರೂಪಾಯಿ 4.43 ಲಕ್ಷ ಮೌಲ್ಯದ ಚಿನ್ನ ವಶ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮುಕ್ಕ, ಸುರತ್ಕಲ್‌ನ ಮಿತ್ರ ಪಟ್ಟಣ ನಿವಾಸಿ 85 ವರ್ಷ ಪ್ರಾಯದ ಜಲಜ ಅವರ ಮನೆಗೆ ದಿನಾಂಕ 03-12-2025 ರಂದು ಮಧ್ಯಾಹ್ನ 2.30ರ ಸುಮಾರಿಗೆ ಅಪರಿಚಿತರು ಬಾಗಿಲು ತಟ್ಟಿ ಕುಡಿಯಲು ನೀರು ಕೇಳಿದ್ದರು. ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಆರೋಪಿತರು ಮನೆಯ ಹಂಚು ತೆಗೆದು ಒಳನುಗ್ಗಿ, ತುಳುವಿನಲ್ಲಿ ಜೀವ ಬೆದರಿಕೆ ಹಾಕಿ ಗೋದ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಹಾಗೂ ಪರ್ಸ್‌ನಲ್ಲಿದ್ದ ಸುಮಾರು ₹14,000 ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 158/2025 ಕಲಂ 309(6) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸ್ ಉಪನಿರೀಕ್ಷಕರಾದ ರಘು ನಾಯಕ್ ಮತ್ತು ರಾಘವೇಂದ್ರ ನಾಯ್ಕ್ ನೇತೃತ್ವದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ ಪರಿಣಾಮ ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ (21) ಎಂಬ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು.

ವಿಚಾರಣೆಯಲ್ಲಿ ಆತ ಜೈಸನ್ @ ಲೆನ್ಸನ್ ಕಾರ್ಕಳ ಎಂಬಾತನೊಂದಿಗೆ ದರೋಡೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಕಳುವಾದ ಚಿನ್ನವನ್ನು ಬೆಂಗಳೂರಿನಲ್ಲಿ ಗಿರೀಶ್ @ ಸೈಕಲ್ ಗಿರಿ ಹಾಗೂ ವಿನೋದ್ @ ಕೋತಿ @ ವಿನೋದ್ ಕುಮಾರ್ ಎಂಬವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಬೆಂಗಳೂರು ತೆರಳಿ ದಿನಾಂಕ 14-12-2025 ರಂದು ಗಿರೀಶ್ ಮತ್ತು ವಿನೋದ್ ಕುಮಾರ್ ಅವರನ್ನು ವಶಕ್ಕೆ ಪಡೆದು, ಆರೋಪಿತರಿಂದ ₹4.43 ಲಕ್ಷ ಮೌಲ್ಯದ ಕಳುವಾದ ಚಿನ್ನಾಭರಣ, ದರೋಡೆಗೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ ₹3,000 ನಗದು ಹಣವನ್ನು ಮಹಜರು ಮುಖೇನ ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಜೈಸನ್ @ ಲೆನ್ಸನ್ ಕಾರ್ಕಳ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತ ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆಯತ್ನ, ಗಾಂಜಾ ಮಾರಾಟ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ದಿನಾಂಕ 15-12-2025 ರಂದು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page