August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ಯಾರಿ ಸಂಸ್ಕೃತಿಯ ಜೀವಾಳ ದಫ್ ಕಲೆ – ಲತೀಫ್ ನೇರಳಕಟ್ಟೆ

ವಿಟ್ಲದಲ್ಲಿ ನಡೆದ ತಾಲೂಕು ಮಟ್ಟದ ದಫ್ ಸ್ಪರ್ಧೆ

ಬ್ಯಾರಿ ಜನಾಂಗವು ಪ್ರಾಚೀನ ಕಾಲದಿಂದಲೂ ಅಳವಡಿಸಿಕೊಂಡು ಬಂದಿರುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾಗಿ ದಫ್ ಕಲೆ ಗುರುತಿಸಿಕೊಂಡಿದೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಹೇಳಿದರು.

ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ವಿಟ್ಲ ಸಮೀಪದ ಒಕ್ಕೆತ್ತೂರು ನೂರುಲ್ ಹುದಾ ಸಮುದಾಯ ಭವನದಲ್ಲಿ ಡಿಸೆಂಬರ್ 18ರಂದು ಗುರುವಾರ ಆಯೋಜಿಸಲಾದ ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ಜನಾಂಗದ ಅಳಿವು–ಉಳಿವು ಅದರ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಳಕೆಯ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಮಹಮ್ಮದ್ ರಫೀಕ್ ಅಹ್ಸನಿ ಮಾತನಾಡಿ, ದಫ್ ಕಲೆಯ ಪ್ರೋತ್ಸಾಹಕ್ಕಾಗಿ ಬ್ಯಾರಿ ಅಕಾಡೆಮಿ ಹಮ್ಮಿಕೊಂಡಿರುವ ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ. ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅವರ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮಗಳು ರಾಜ್ಯದಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಅವರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಹಿರಿಯ ದಫ್ ತರಬೇತುದಾರ ಬಿ.ಎಂ. ಹಸೈನಾರ್ ಕಡಂಬು ಹಾಗೂ ಸಾಮಾಜಿಕ ಮುಂದಾಳು ಅಬ್ದುಲ್ ಕರೀಮ್ ಕುದ್ದುಪದವು ಶುಭ ಹಾರೈಸಿದರು.

ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ವಿ.ಎಂ. ಅಶ್ರಫ್, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಪ್ರಮುಖರಾದ ವಿ.ಎಸ್. ಇಬ್ರಾಹಿಂ ಒಕ್ಕೆತ್ತೂರು, ಹಸೈನಾರ್ ಹಾಜಿ ಪೈಲ್ವಾನ್ ಹಾಗೂ ಒಕ್ಕೆತ್ತೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್. ಹಾರಿಸ್ ಅತಿಥಿಗಳಾಗಿ ಭಾಗವಹಿಸಿದ್ದರು.

ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ರಿಫಾಯಿಯ್ಯ ದಫ್ ಸಂಘ ಕಡಂಬು ಪ್ರಥಮ ಸ್ಥಾನ ಹಾಗೂ ಒಕ್ಕೆತ್ತೂರು ದಫ್ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದವು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸಿಬಂಧಿ ವಿಜಯ್ ವಂದಿಸಿದರು.

You may also like

News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ
News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

You cannot copy content of this page