July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ – 16 ಮಂದಿ ವಶ, 22 ಹುಂಜ ಕೋಳಿ ಜಪ್ತಿ

ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಅವರ ಸಮಯೋಚಿತ ಕ್ರಮಕ್ಕೆ ವ್ಯಾಪಕ ಶ್ಲಾಘನೆ

ಪುತ್ತೂರು MLA ಅಶೋಕ್ ರೈ ವಿರುದ್ಧವೂ FIR

ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಅವರು ತೋರಿದ ಸಮಯೋಚಿತ ಮತ್ತು ಕಠಿಣ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಡಿಸೆಂಬರ್ 20ರಂದು ಶನಿವಾರ ಮಧ್ಯಾಹ್ನ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಅವರ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯಲಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ನಿರೀಕ್ಷಕರು ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವರು ಕೋಳಿ ಅಂಕಕ್ಕೆ ಬಳಸುವ ಹುಂಜ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿದ್ದುದು ಕಂಡುಬಂದಿದೆ. ಪ್ರಾರಂಭದಲ್ಲಿ ಸ್ಥಳದಲ್ಲಿದ್ದವರಿಗೆ ಕೋಳಿ ಅಂಕ ಕಾನೂನುಬಾಹಿರ ಎಂಬುದರ ಕುರಿತು ಸೂಕ್ತ ಕಾನೂನು ತಿಳುವಳಿಕೆ ನೀಡಲಾಗಿದೆ.

ಆದರೆ ಈ ವೇಳೆ ಸ್ಥಳದಲ್ಲಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಅಲ್ಲಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕವನ್ನು ಮುಂದುವರಿಸಲು ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ ಪರಿಣಾಮ, ಜನರು ಅಕ್ರಮವಾಗಿ ಕೋಳಿ ಅಂಕ ಆಟವನ್ನು ಆರಂಭಿಸಿದ್ದರೆನ್ನಲಾಗಿದೆ. ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಿದ ವಿಟ್ಲ ಪೊಲೀಸ್ ನಿರೀಕ್ಷಕರು ಅಗತ್ಯ ಭದ್ರತೆ ಒದಗಿಸಿ, ಅಕ್ರಮ ಕೋಳಿ ಅಂಕದಲ್ಲಿ ತೊಡಗಿದ್ದ 16 ಜನರನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳು ಹಾಗೂ ಕೋಳಿ ಅಂಕಕ್ಕೆ ಬಳಸುತ್ತಿದ್ದ ಬಾಳು (ಕತ್ತಿಗಳನ್ನು) ಸ್ವಾಧೀನಪಡಿಸಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ.

ಈ ಸಂಬಂಧ, ಯಾವುದೇ ಪರವಾನಿಗೆ ಪಡೆಯದೇ ತಮ್ಮ ಜಾಗದಲ್ಲಿ ಕಾನೂನುಬಾಹಿರ ಕೃತ್ಯಕ್ಕೆ ಅವಕಾಶ ನೀಡಿದ ಮುರಳೀಧರ ರೈ ಹಾಗೂ ಅಕ್ರಮ ಕೃತ್ಯಕ್ಕೆ ಪ್ರಚೋದನೆ ನೀಡಿದ ಪುತ್ತೂರು ಶಾಸಕರ ವಿರುದ್ಧ ಮತ್ತು ಕೋಳಿ ಅಂಕದಲ್ಲಿ ತೊಡಗಿದ್ದ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 190/2025 ಅಡಿಯಲ್ಲಿ BNS–2023ರ ಕಲಂಗಳು 189(2), 49, 221, 223, 190 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960ರ ಕಲಂ 3 ಮತ್ತು 11ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಚಟುವಟಿಕೆಗಳ ವಿರುದ್ಧ ರಾಜಕೀಯ ಒತ್ತಡಕ್ಕೂ ತಲೆಬಾಗದೆ ಕಾನೂನು ರಕ್ಷಣೆಗಾಗಿ ದೃಢವಾಗಿ ನಿಂತ ವಿಟ್ಲ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಅವರ ಕಾರ್ಯವೈಖರಿ ಸಾರ್ವಜನಿಕರಿಂದ ಶ್ಲಾಘನೆಗೆ ಪಾತ್ರವಾಗಿದ್ದು, ಇಂತಹ ದಾಳಿಗಳು ಮುಂದೆಯೂ ಮುಂದುವರಿಯಬೇಕೆಂಬ ಆಗ್ರಹ ಕೇಳಿಬರುತ್ತಿದೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page