April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್ ಅಕ್ರಮ

ಪೊಲೀಸ್ ಸಿಬ್ಬಂದಿ ಅಮಾನತು – ಇಬ್ಬರ ವಿರುದ್ಧ ಪ್ರಕರಣ ದಾಖಲು

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡು SHAKTI DAS ಎಂಬ ವ್ಯಕ್ತಿಯು 2025ರ ಫೆಬ್ರವರಿ ತಿಂಗಳಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಪೊಲೀಸ್ ಪರಿಶೀಲನೆಯ ವೇಳೆ ಅರ್ಜಿದಾರನ ವಿಳಾಸವು ದಾಖಲೆಗಳಲ್ಲಿನ ವಿಳಾಸಕ್ಕೆ ಹೊಂದಿಕೆಯಾಗದ ಕಾರಣ ಅರ್ಜಿಯನ್ನು ನಾ-ಶಿಫಾರಸ್ಸು ಮಾಡಲಾಗಿತ್ತು.

ನಂತರ SHAKTI DAS ಅವರು 2025ರ ಜೂನ್ ತಿಂಗಳಲ್ಲಿ ಮರುಅರ್ಜಿಯನ್ನು ಸಲ್ಲಿಸಿದ್ದರು. ಈ ಮರುಅರ್ಜಿಗೆ ಸಂಬಂಧಿಸಿ, ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಪ್ರದೀಪ್ ಎಂಬವರು, ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಲ್ಲದೇ ಅವರ ಹೆಸರಿನಲ್ಲಿ ಸುಳ್ಳು ವರದಿ ತಯಾರಿಸಿ, ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಗಳಿಂದ ಶಿಫಾರಸ್ಸು ಪಡೆದು ಕಳುಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಈ ಅಕ್ರಮ ಯಾರಿಗೂ ಗೊತ್ತಾಗದಂತೆ ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿರುವುದೂ ಬೆಳಕಿಗೆ ಬಂದಿದೆ.

ದಿನಾಂಕ 19-12-2025ರಂದು ಶುಕ್ರವಾರ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರದಿಂದ ನೀಡಲಾಗುವ ಅತ್ಯಂತ ಪ್ರಮುಖ ಗುರುತಿನ ಚೀಟಿಯಾದ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವಂತೆ ಅಪರಾಧಿಕ ನಂಬಿಕೆ ದ್ರೋಹ ಎಸಗಿದ ಆರೋಪದ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿತ ಪೊಲೀಸ್ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆಗಳ ಮೂಲಕ ಪಾಸ್‌ಪೋರ್ಟ್ ಪಡೆದ SHAKTI DAS ವಿರುದ್ಧ ಅ.ಕ್ರ. 193/2025, ಕಲಂ 336, 337, 316(5), 238 BNS 2023ರಂತೆ ಪ್ರಕರಣ ದಾಖಲಾಗಿದೆ.

ಆರೋಪಿತ ಪ್ರದೀಪ್ ಅವರನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಮತ್ತೊಬ್ಬ ಆರೋಪಿತನಾದ ಶಕ್ತಿ ದಾಸ್ ಪೊಲೀಸ್ ವಶದಲ್ಲಿದ್ದು, ವಿಚಾರಣೆಯ ವೇಳೆ ಆತನು ತಾನು ಪಶ್ಚಿಮ ಬಂಗಾಳ ನಿವಾಸಿ ಎಂದು ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ, ಪ್ರಕರಣದ ಆರೋಪಿತ ಪೊಲೀಸ್ ಸಿಬ್ಬಂದಿ ಪ್ರದೀಪ್ ಅವರನ್ನು ದಿನಾಂಕ 22-12-2025ರಂದು ಸೋಮವಾರ ಇಲಾಖಾ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page