July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೈಬರಹದಲ್ಲಿ ಕೊಂಕಣಿ ಬೈಬಲ್ ರಚಿಸಿ ಇತಿಹಾಸ ನಿರ್ಮಿಸಿದ ಅಲಂಗಾರ್ ಚರ್ಚ್ ಭಕ್ತೆಯರು

ಮಂಗಳೂರು ಧರ್ಮಕ್ಷೇತ್ರಕ್ಕೆ ಹೆಮ್ಮೆ ತಂದ ಹೆಲೆನ್ ಲೋಬೊ, ಜೆಸಿಂತಾ ಡಿಮೆಲ್ಲೊ ಮತ್ತು ಮಾರಿಯಾ ಫ್ಲಾವಿಯಾ ಕುವೆಲ್ಲೊರ ಅಪೂರ್ವ ಸಾಧನೆ

ಅಲಂಗಾರ್ ಚರ್ಚ್ ನಂಬಿಕೆಯ ಪರಂಪರೆಗೆ ಹೊಸ ಆಯಾಮ

ಕ್ರಿಶ್ಚಿಯನ್ ಧರ್ಮದಲ್ಲಿ ಬೈಬಲ್ ಅತ್ಯಂತ ಪವಿತ್ರ ಗ್ರಂಥ. ದಿನನಿತ್ಯ ಓದಿ ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಬೋಧಿಸುವ ಈ ಗ್ರಂಥವನ್ನು ಓದುವವರು ಅನೇಕರು. ಆದರೆ ಅದನ್ನು ಪೂರ್ಣವಾಗಿ ಕೈಬರಹದಲ್ಲಿ ಬರೆಯುವುದು ಅಪರೂಪದ ಸಾಧನೆ. ಇಂತಹ ಅಪೂರ್ವ ಕಾರ್ಯವನ್ನು ನೆರವೇರಿಸಿ ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿರುವವರು ಅಲಂಗಾರ್ ಚರ್ಚ್ ನ ಭಕ್ತೆಯರಾದ ಹೆಲೆನ್ ಲೋಬೊ, ಜೆಸಿಂತಾ ಡಿಮೆಲ್ಲೊ ಮತ್ತು ಮಾರಿಯಾ ಫ್ಲಾವಿಯಾ ಕುವೆಲ್ಲೊ.

ಹೆಲೆನ್ ಲೋಬೊ

ಜೆಸಿಂತಾ ಡಿಮೆಲ್ಲೊ

ಮಾರಿಯಾ ಫ್ಲಾವಿಯಾ ಕುವೆಲ್ಲೊ

ಅಲಂಗಾರ್ ಚರ್ಚ್ ನ ಈ ಮೂವರು ಭಕ್ತೆಯರು ಕೊಂಕಣಿ ಭಾಷೆಯಲ್ಲಿ ಪವಿತ್ರ ಬೈಬಲ್ ಅನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆದು, ಇಡೀ ಕ್ರೈಸ್ತ ಸಮುದಾಯಕ್ಕೆ ಪ್ರೇರಣೆಯ ಮಾದರಿಯಾಗಿದ್ದಾರೆ. ಹೆಲೆನ್ ಲೋಬೊ ಅವರು ಕೇವಲ 11 ತಿಂಗಳ ಅವಧಿಯಲ್ಲಿ, ಜೆಸಿಂತಾ ಡಿಮೆಲ್ಲೊ ಅವರು 11 ತಿಂಗಳು 8 ದಿನಗಳಲ್ಲಿ ಪವಿತ್ರ ಬೈಬಲ್‌ನ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಮಾರಿಯಾ ಫ್ಲಾವಿಯಾ ಕುವೆಲ್ಲೊ ಅವರು ಹೊಸ ಒಡಂಬಡಿಕೆಯನ್ನು ಸಂಪೂರ್ಣವಾಗಿ ಕೈಬರಹದಲ್ಲಿ ರಚಿಸಿ ಈ ಮಹತ್ತರ ಸಾಧನೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.

ಈ ಪವಿತ್ರ ಪ್ರಯತ್ನಕ್ಕೆ ಬೀಜ ಬಿತ್ತಿದ ಘಟನೆ 2022ರಲ್ಲಿ ನಡೆಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಅಲಂಗಾರ್ ಚರ್ಚ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ, “ಯಾರೆಲ್ಲಾ ಬೈಬಲ್ ಓದುತ್ತೀರಿ?” ಎಂಬ ಪ್ರಶ್ನೆಗೆ ಹಲವರು ಕೈ ಎತ್ತಿದರು. ಆದರೆ “ಯಾರೆಲ್ಲಾ ಬೈಬಲ್ ಬರೆದಿದ್ದೀರಾ?” ಎಂಬ ಪ್ರಶ್ನೆಗೆ ಚರ್ಚ್‌ನಲ್ಲಿ ನಿಶ್ಶಬ್ದವೇ ಉತ್ತರವಾಗಿತ್ತು. ಈ ನಿಶ್ಶಬ್ದವೇ ಹೆಲೆನ್, ಜೆಸಿಂತಾ ಹಾಗೂ ಮಾರಿಯಾ ಇವರ ಹೃದಯದಲ್ಲಿ ಆಳವಾದ ಚಿಂತನೆಗೆ ಕಾರಣವಾಯಿತು. “ನಾವೇಕೆ ಇಡೀ ಬೈಬಲ್ ಬರೆಯಬಾರದು?” ಎಂಬ ಪ್ರಶ್ನೆ ಮೂಡಿ, ಅದೇ ದಿನದಿಂದಲೇ ಈ ಪವಿತ್ರ ಸಂಕಲ್ಪಕ್ಕೆ ಚಾಲನೆ ದೊರಕಿತು.

ಇದಕ್ಕೆ ಮತ್ತಷ್ಟು ಪ್ರೇರಣೆಯಾದದ್ದು 2023ರಲ್ಲಿ ಅಲಂಗಾರ್ ಧರ್ಮಕೇಂದ್ರವು ಹಿರಿಯರಿಗಾಗಿ ಆಯೋಜಿಸಿದ್ದ ಕೈಬರಹದ ಬೈಬಲ್ ಸ್ಪರ್ಧೆ. ಒಂದು ವರ್ಷದೊಳಗೆ ಸಂಪೂರ್ಣ ಬೈಬಲ್ ಬರೆಯುವುದು ಸ್ಪರ್ಧೆಯ ಷರತ್ತು ಆಗಿತ್ತು. ಈ ಸವಾಲು ಮೂವರಲ್ಲಿಯೂ ಅಪಾರ ಉತ್ಸಾಹ ತುಂಬಿ, ಶ್ರದ್ಧೆ, ಶಿಸ್ತು ಹಾಗೂ ನಂಬಿಕೆಯೊಂದಿಗೆ ಅವರು ಈ ಮಹಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಈ ಅಪೂರ್ವ ಸಾಧನೆಗೆ ಅಲಂಗಾರ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ, ವಿಶ್ರಾಂತ ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಡ್ವರ್ಡ್ ಸೆರಾವೊ, ಕಾರ್ಯದರ್ಶಿ ಲಾರೆನ್ಸ್ ಅನಿಲ್ ಡಿಕುನ್ಹಾ, ಆಯೋಗಗಳ ಸಂಯೋಜಕ ರಾಜೇಶ್ ಡಿಸೋಜ ಕಡಲಕೆರೆ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಮೂಡಬಿದ್ರೆ ವಲಯದ ಅಧ್ಯಕ್ಷ ಆಲ್ವಿನ್ ರೊಡ್ರಿಗಸ್, ಹಾಗೂ ಎಲ್ಲಾ ಭಕ್ತಾಧಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸಾಧನೆ ಕೇವಲ ಒಂದು ವೈಯಕ್ತಿಕ ಯಶಸ್ಸಲ್ಲ; ಇದು ನಂಬಿಕೆ, ತಾಳ್ಮೆ, ಶ್ರದ್ಧೆ ಮತ್ತು ದೇವರ ವಾಕ್ಯದ ಮೇಲಿನ ಅಪಾರ ಪ್ರೀತಿಯ ಪ್ರತೀಕವಾಗಿದೆ. ಅಲಂಗಾರ್ ಚರ್ಚ್ ನ ಈ ಮೂವರು ಭಕ್ತೆಯರು ಮಂಗಳೂರು ಧರ್ಮಕ್ಷೇತ್ರದ ನಂಬಿಕೆಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿ, ಮುಂದಿನ ತಲೆಮಾರಿಗೆ ಪ್ರೇರಣೆಯ ದೀಪವಾಗಿದ್ದಾರೆ. ಇವರ ಸಾಧನೆಗೆ ವ್ಯಾಪಕ ಪ್ರಶಂಸೆಗಳು ಎಲ್ಲೆಡೆಯಿಂದಲು ಹರಿದು ಬರುತ್ತಾ ಇವೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page