April 19, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ನಿರಂತರ ಸಾಹಿತ್ಯ ಪುರಸ್ಕಾರ’ ಕ್ಕೆ ಪುತ್ತೂರಿನ ಕವಯತ್ರಿ ಫ್ಲಾವಿಯಾ ಅಲ್ಬುಕರ್ಕ್ ಆಯ್ಕೆ

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿರುವ ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಹಾಗೂ ನಿರಂತರ ಪ್ರಕಾಶನದ ವತಿಯಿಂದ 2025ನೇ ಸಾಲಿನ ‘ನಿರಂತರ ಸಾಹಿತ್ಯ ಪುರಸ್ಕಾರ’ ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ ಹಾಗೂ ಕವಯತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಾಶಕ ಹಾಗೂ ಹಿರಿಯ ಕವಿ ಎ.ಎಸ್. ಮಕಾನದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫ್ಲಾವಿಯಾ ಅಲ್ಬುಕರ್ಕ್ ಅವರು ಕನ್ನಡದ ಅನೇಕ ಹಿರಿಯ ಹಾಗೂ ಕಿರಿಯ ಕವಿಗಳ ಕವನಗಳು ಮತ್ತು ಗದ್ಯ ಸಾಹಿತ್ಯವನ್ನು ಕೊಂಕಣಿ ಭಾಷೆಗೆ ಅನುವಾದಿಸುವುದರ ಜೊತೆಗೆ, ಕೊಂಕಣಿಯ ತ್ರಿಲಿಪಿ ಅನುವಾದಗಳ ಮೂಲಕ ಕರಾವಳಿ ಭಾಗದ ದ್ವಿಭಾಷಾ ಓದುಗರಲ್ಲಿ ಮಾತ್ರವಲ್ಲದೆ ಮುಂಬೈ, ಗೋವಾ ಹಾಗೂ ವಿದೇಶಗಳಲ್ಲಿನ ಕೊಂಕಣಿ ಓದುಗರಲ್ಲಿಯೂ ಚಿರಪರಿಚಿತರಾಗಿದ್ದಾರೆ. ದೆಹಲಿ ಸಾಹಿತ್ಯ ಅಕಾಡೆಮಿ, ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು, ಕವಿತಾ ಟ್ರಸ್ಟ್, ಆಶಾವಾದಿ ಪ್ರಕಾಶನ್ ಹಾಗೂ ಮಾಂಡ್ ಸೊಭಾನ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಮತ್ತು ಚಿಂತನೆಗಳು ಪ್ರಸಾರಗೊಂಡಿವೆ.

ವಿದ್ಯಾರ್ಥಿಗಳಲ್ಲಿ ಮೆಚ್ಚುಗೆ ಪಡೆದ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಫ್ಲಾವಿಯಾ ಅವರು, ಬರವಣಿಗೆಯ ಮೂಲಕ ಸಮಾಜಮುಖಿ ಚಿಂತನೆಗಳನ್ನು ಅಭಿವ್ಯಕ್ತಪಡಿಸುವುದರ ಜೊತೆಗೆ ಪ್ರಗತಿಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದಕ್ಷಿಣ ಕನ್ನಡ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ, ಮಂಗಳೂರು ಇವರಿಂದ ‘ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ’ ಲಭಿಸಿದೆ. ಇದಲ್ಲದೆ, ಮಾಣಿಕ್ಯ ಪ್ರಕಾಶನ (ರಿ.), ಹಾಸನದ ‘ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ–2025’, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ನಾಡು–ನುಡಿ ಸಾಹಿತ್ಯ ಸಮ್ಮೇಳನದ ‘ಕಾವ್ಯ ದಶಾವತಾರ ಕವಿ–ಕಾವ್ಯ ಪುರಸ್ಕಾರ’, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು–ಮಹಾರಾಷ್ಟ್ರ ರಾಜ್ಯ ಘಟಕದ ಅಖಿಲ ಭಾರತ ಪ್ರಥಮ ಕೇಂದ್ರ ಸಾಹಿತ್ಯ ಸಮ್ಮೇಳನ, ಮುಂಬೈಯಲ್ಲಿ ಪ್ರದಾನವಾದ ‘ನುಡಿ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ–2025’ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥ ನೀಡುವ ‘ಕನ್ನಡ ಸ್ವಾಭಿಮಾನ ಸ್ಮರಣಿಕೆ’ ಗೌರವವನ್ನು ಸಿರಿಗನ್ನಡ ಪ್ರಕಾಶನ, ಚಿತ್ರದುರ್ಗದಿಂದ ಪಡೆದಿದ್ದಾರೆ.

ಡಿಸೆಂಬರ್ 28ರಂದು ರವಿವಾರ ಪುತ್ತೂರಿನಲ್ಲಿ ಬಹುಭಾಷಾ ಕವಿಗೋಷ್ಠಿ, ಚುಟುಕು ಗೋಷ್ಠಿ ಹಾಗೂ ಫ್ಲಾವಿಯಾ ಅಲ್ಬುಕರ್ಕ್ ಅವರ ‘ಸಖಿ ಸೂಸಿದ ಸೌಗಂಧ’ ಚುಟುಕು ಸಂಕಲನದ ಬಿಡುಗಡೆ ಸಮಾರಂಭದೊಂದಿಗೆ ‘ನಿರಂತರ ಸಾಹಿತ್ಯ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕ ಎ.ಎಸ್. ಮಕಾನದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

ಶಿಕ್ಷಣ ತಜ್ಞ ದಿವಂಗತ ಫಾದರ್ ಮೆಲ್ವಿನ್ ಜೆ. ಪಿಂಟೋ ಅವರಿಗೆ ಕ್ಷೇವಿಯರ್ ಐಟಿಐ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿ

ಏಪ್ರಿಲ್ 10ರಂದು ಶುಕ್ರವಾರ ನಿಧನರಾದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿಗಳು ಹಾಗೂ ಹಿರಿಯ ಜೆಸ್ಯೂಟ್ ಶಿಕ್ಷಣ ತಜ್ಞರಾದ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ಜೆ.
News

Graduation Ceremony of Father Muller School & College of Nursing and Father Muller College (Speech & Hearing) celebrated

The Father Muller School of Nursing, Father Muller College of Nursing, and Father Muller College (Speech & Hearing), units of

You cannot copy content of this page