ಮೊಗರ್ನಾಡ್ ಚರ್ಚ್ ನಲ್ಲಿ ವಿದೇಶಿಯರ ದಿನ ಹಾಗೂ ಕ್ರಿಸ್ಮಸ್ ಸಂಜೆಯ ಅದ್ದೂರಿ ಆಚರಣೆ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಮೊಗರ್ನಾಡ್ ಚರ್ಚ್ ನ 250ನೇ ವರ್ಷದ ಜ್ಯುಬಿಲಿ ವರ್ಷಾಚರಣೆ ಪ್ರಯುಕ್ತ ಡಿಸೆಂಬರ್ 25ರಂದು ಗುರುವಾರ ಕ್ರಿಸ್ಮಸ್ ಹಬ್ಬದಂದು ಹೊರದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮೊಗರ್ನಾಡ್ ಚರ್ಚ್ ವ್ಯಾಪ್ತಿಯ ವಿದೇಶಿಯರನ್ನು ಗೌರವಿಸುವ ‘ವಿದೇಶಿಯರ ದಿನ’ ಹಾಗೂ ‘ಕ್ರಿಸ್ಮಸ್ ಸಂಜೆ’ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.









ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆದ ದಿವ್ಯ ಬಲಿ ಪೂಜೆಯನ್ನು ಫರಂಗಿಪೇಟೆ ದೇವಾಲಯದ ಮುಖ್ಯಸ್ಥರಾದ ವಂದನೀಯ ಫಾದರ್ ಡೆನಿಸ್ ಮೊಂತೇರೊ ಪ್ರಧಾನ ಧರ್ಮಗುರುಗಳಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು–ಕರಿಂಗಾನ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಹಾಗೂ ಪ್ರಧಾನ ಸೇವಕರಾದ ವಂದನೀಯ ಅವಿಲ್ ಸಾಂತುಮಾಯೋರ್ ಉಪಸ್ಥಿತರಿದ್ದರು.










ಸಂಜೆ 6 ಗಂಟೆಗೆ ದೇವಾಲಯದ ಹೊರಾಂಗಣದಲ್ಲಿ ICYM ಮೊಗರ್ನಾಡ್ ಘಟಕ ಹಾಗೂ ಜ್ಯುಬಿಲಿ ಸಮಿತಿಯ ಸಹಭಾಗಿತ್ವದಲ್ಲಿ ವಿದೇಶಿಯರ ದಿನ ಮತ್ತು ಕ್ರಿಸ್ಮಸ್ ಸಂಜೆ ಕಾರ್ಯಕ್ರಮ ನಡೆಯಿತು. ದುಬೈ ಉದ್ಯಮಿ ವಿಲಿಯಂ ಲೋಬೊ ಮತ್ತು ಹೆಲೆನ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಲೆನ್ ಲೋಬೊ ಅವರು, ಈ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂತೋಷವನ್ನು ವ್ಯಕ್ತಪಡಿಸಿ ಜ್ಯುಬಿಲಿ ಸಮಾರೋಪಕ್ಕೆ ಶುಭ ಹಾರೈಸಿದರು. ಬಳಿಕ ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ವಿವಿಧ ವಲಯಗಳ ವಿದೇಶಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.











ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಮಾತನಾಡಿ, ಹೊರದೇಶದಲ್ಲಿ ದುಡಿಯುವ ವಿದೇಶಿಯರು ಕಷ್ಟಕರ ಜೀವನ ನಡೆಸುತ್ತಾ ತಮ್ಮ ಕುಟುಂಬಗಳನ್ನು ಮುನ್ನಡೆಸುತ್ತಿರುವುದರ ಜೊತೆಗೆ ದೇವಾಲಯದ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಉದಾರವಾಗಿ ಸಹಾಯ ನೀಡುತ್ತಿರುವುದನ್ನು ಶ್ಲಾಘಿಸಿದರು. ಏಸುಕ್ರಿಸ್ತರು ತಂದುಕೊಟ್ಟ ಶಾಂತಿ ಮತ್ತು ಸಮಾಧಾನ ಎಲ್ಲೆಡೆ ಹರಡಬೇಕು; ದೇವರ ರಾಜ್ಯವನ್ನು ಈ ಭೂಮಿಯಲ್ಲಿ ಸ್ಥಾಪಿಸುವ ಹೊಣೆ ನಮ್ಮೆಲ್ಲರದು ಎಂದು ಅವರು ಹೇಳಿದರು.





















ವೇದಿಕೆಯಲ್ಲಿ ದೇವ ಮಾತಾ ಕಾನ್ವೆಂಟ್ ಮುಖ್ಯಸ್ಥೆ ವಂದನೀಯ ಸಿಸ್ಟರ್ ಆ್ಯನ್ನಿ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ, ICYM ಸಚೇತಕ ಪ್ರಶಾಂತ್ ಲೂವಿಸ್, ICYM ಮೊಗರ್ನಾಡ್ ಘಟಕದ ಅಧ್ಯಕ್ಷ ಮೆಲ್ರೊಯ್ ಡಿಸೋಜ ಸೇರಿದಂತೆ ವಿವಿಧ ವಲಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.



ಮೆಲ್ರೊಯ್ ಸ್ವಾಗತಿಸಿ, ಪ್ರಶಾಂತ್ ಲೂವಿಸ್ ಧನ್ಯವಾದಗೈದರು. ರೀಶಲ್ ಡಿಕುನ್ಹಾ, ಅನಿಶಾ ಪಿಂಟೊ ಹಾಗೂ ರೆನಿಶಾ ಜೊಯ್ಲಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಾಲಯದ ವಿವಿಧ ವಲಯಗಳು ಮತ್ತು ಸಂಘ–ಸಂಸ್ಥೆಗಳ ವತಿಯಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.





