August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಡೂರಿನ ಡಾ. ರಶ್ಮಾ ಎಂ. ಶೆಟ್ಟಿ ಅವರಿಗೆ ‘ಮಿಸೆಸ್ ಇಂಡಿಯಾ–2025’ ಕಿರೀಟ

ಮಂಡೂರಿನ ಡಾ. ರಶ್ಮಾ ಎಂ. ಶೆಟ್ಟಿ ಅವರು ಪ್ರತಿಷ್ಠಿತ ‘ಮಿಸೆಸ್ ಇಂಡಿಯಾ–2025’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಡಿಸೆಂಬರ್ 18ರಿಂದ 21ರವರೆಗೆ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಮಿಸೆಸ್ ಇಂಡಿಯಾ ಸೀಸನ್–15 ಅಂತಿಮ ಸ್ಪರ್ಧೆಯಲ್ಲಿ ಅವರು ಈ ಗೌರವವನ್ನು ಪಡೆದರು.

ಭಾರತದ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆಯುತ್ತಿರುವ ಸೌಂದರ್ಯ ಸ್ಪರ್ಧೆಗಳಲ್ಲೊಂದು ಆಗಿರುವ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಭಾಗವಹಿಸಿದ್ದರು. ನಾಲ್ಕು ದಿನಗಳ ಈ ಸ್ಪರ್ಧೆಯಲ್ಲಿ ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ್‍ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಸೇರಿದಂತೆ ಹಲವು ಹಂತಗಳಲ್ಲಿ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು. ಈ ಹಿಂದೆ ಮಿಸೆಸ್ ಇಂಡಿಯಾ ಕರ್ನಾಟಕ–2024 ಸ್ಪರ್ಧೆಯಲ್ಲಿ ಡಾ. ರಶ್ಮಾ ಎಂ. ಶೆಟ್ಟಿ ಅವರು ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.

ಈ ವರ್ಷದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಅವರು ಟ್ಯಾಲೆಂಟ್ ರೌಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಬಹುಮಾನ, ರ್‍ಯಾಂಪ್ ವಾಕ್ ವಿಭಾಗದಲ್ಲಿ ಅತ್ಯುತ್ತಮ ನಡೆ ಬಹುಮಾನ ಹಾಗೂ ಉತ್ತಮ ಟಾಸ್ಕ್ (ಶಾರ್ಟ್ ಫಿಲ್ಮ್ಸ್) ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದು ವಿಶೇಷ ಗಮನ ಸೆಳೆದರು. 2024ರ ಮೇ 19ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲೂ ಅವರು ಪ್ರಥಮ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಲ್ಲದೆ ಬಂಟರ ಸಂಘ ಮುಂಬಯಿ ಯುವ ವಿಭಾಗ ಆಯೋಜಿಸಿದ ‘ಆಕಾಂಕ್ಷ ಮಿಸೆಸ್ ಬಂಟ್ಸ್–2023’ ಸ್ಪರ್ಧೆಯಲ್ಲಿ ಸಹ ಪ್ರಥಮ ರನ್ನರ್ ಅಪ್ ಗೌರವ ಪಡೆದಿದ್ದಾರೆ.

ಪುತ್ತೂರು ತಾಲೂಕಿನ ಮಂಡೂರು ಗ್ರಾಮದ ಪೊನೋನಿಯದಲ್ಲಿ ಬೆಳೆದ ಡಾ. ರಶ್ಮಾ ಎಂ. ಶೆಟ್ಟಿ ಅವರು ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿ. ಇವರು ಕಟಪಾಡಿ ಮೂಡುಬೆಟ್ಟು, ಹೊಸಮನೆ ಮನೋಹರ್ ಶೆಟ್ಟಿ (ಐನಾಕ್ ಅಪ್ಟಿಕ್ಸ್) ಮತ್ತು ಮುಚೂರು ಬರ್ಕೆ ದಿ. ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷೆ, ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆ. ಪತಿ ಮೋಹಿತ್ ಶೆಟ್ಟಿ ಹಾಗೂ ಏಳು ವರ್ಷದ ಪುತ್ರಿ ನೇಸರ ಅವರೊಂದಿಗೆ ಪ್ರಸ್ತುತ ಮುಂಬೈನಲ್ಲಿ ವಾಸವಿದ್ದು, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೈದ್ಯಕೀಯ ಸೇವೆಯೊಂದಿಗೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿರುವ ಡಾ. ರಶ್ಮಾ ಎಂ. ಶೆಟ್ಟಿ ಅವರು ಮುಲುಂಡ್ ಹಿಲ್ಸ್ ಇನರ್ ವೀಲ್ ಕ್ಲಬ್‌ನ ಸಮಿತಿಯ ಕಾರ್ಯದರ್ಶಿಯಾಗಿ ಮಹಿಳೆಯರ ಆರೋಗ್ಯ ಮತ್ತು ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಕುರಿತು ಅನೇಕ ಲೈವ್ ಸೆಮಿನಾರ್‌ಗಳನ್ನು ನಡೆಸಿದ್ದಾರೆ. ನವಿ ಮುಂಬೈಯ ಡಾ. ಡಿವೈ ಪಾಟೀಲ್ ಪ್ರಕೃತಿ ಚಿಕಿತ್ಸೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ಪುತ್ತೂರು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಪದವಿಯನ್ನು ಪಡೆದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ರಾಜ್ಯಮಟ್ಟದ ಅಥ್ಲೆಟಿಕ್ಸ್ ಹಾಗೂ ಥ್ರೋಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಅವರು ತಮ್ಮ ಬಹುಮುಖ ಪ್ರತಿಭೆಯಿಂದಲೂ ಗುರುತಿಸಿಕೊಂಡಿದ್ದಾರೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page