July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಪ್ಪಳಕಾಡು ರಸ್ತೆಯಲ್ಲಿ ಚಿನ್ನದ ಸರ ಸುಲಿಗೆ – 72 ಗಂಟೆಗಳಲ್ಲಿ ಆರೋಪಿ ಬಂಧನ

ರೂಪಾಯಿ 3.5 ಲಕ್ಷ ಮೌಲ್ಯದ ಕರಿಮಣಿ ಸರ ವಶ

ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸ್ ಇಲಾಖೆ ಅತೀ ಶೀಘ್ರದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನೊಂದ ಮಹಿಳೆಗೆ ಸೇರಿದ 32 ಗ್ರಾಂ ತೂಕದ, ಅಂದಾಜು ರೂಪಾಯಿ 3,50,000 ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 25ರಂದು ಗುರುವಾರ ಸಂಜೆ ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ ವೇಳೆ, ಶಂಕರಭವನ ಹೋಟೆಲ್ ಸಮೀಪದ ಕೊಪ್ಪಳಕಾಡು ರಸ್ತೆಯಲ್ಲಿ ಸಂಜೆ ಸುಮಾರು 6.30ರ ವೇಳೆಗೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025, ಕಲಂ 304(2) ಭಾರತೀಯ ನ್ಯಾಯ ಸಂಹಿತೆ–2023ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗವಿರಾಜ್ ಮತ್ತು ಅರುಣ್ ಕುಮಾರ್, ಪಿಎಸ್‌ಐ, ಠಾಣೆಯ ಕ್ರೈಂ ಸಿಬ್ಬಂದಿ ಹಾಗೂ ಎಸಿಪಿ ದಕ್ಷಿಣ ಉಪವಿಭಾಗದ ಕ್ರೈಂ ಸಿಬ್ಬಂದಿಗಳ ಸಂಯುಕ್ತ ತಂಡವು ಆರೋಪಿಯ ಪತ್ತೆ ಕಾರ್ಯ ನಡೆಸಿ, ಲಭ್ಯವಿದ್ದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಡಿಸೆಂಬರ್ 28ರಂದು ಭಾನುವಾರ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಬಂಟ್ವಾಳ ತಾಲೂಕಿನ ಕುಕ್ಕೆಪದವು ಪ್ರದೇಶದಲ್ಲಿ ರೋಹಿತ್ ಬಿ. ದಾಸ್ ಎಂಬ ಆರೋಪಿಯನ್ನು ಬಂಧಿಸಿದೆ.

ಬಂಧಿತ ಆರೋಪಿಯಿಂದ ಸುಲಿಗೆ ಮಾಡಲಾದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ (ಮೌಲ್ಯ ₹3.5 ಲಕ್ಷ) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಆರೋಪಿಯು ಸ್ವಿಗ್ಗಿ ಮತ್ತು ಝೋಮೆಟೋ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದುದೂ, ಇತ್ತೀಚೆಗೆ ಸ್ಕೂಟರ್ ಖರೀದಿಸಿ ಇತರ ವೈಯಕ್ತಿಕ ಕಾರಣಗಳಿಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಆ ಸಾಲ ತೀರಿಸಲು ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿ 24 ವರ್ಷ ಪ್ರಾಯದ ರೋಹಿತ್ ಬಿ. ದಾಸ್ ವಿಳಾಸ: ಬಿತ್ತ ಮನೆ, ಪಂಚದುರ್ಗ ಪ್ರೌಢಶಾಲೆಯ ಹಿಂಭಾಗ, ಕಕ್ಕೆಪದವು, ಉಳಿಗ್ರಾಮ ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಎಂದು ಗುರುತಿಸಲಾಗಿದೆ.

2025ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು ಏಳು ಸರಗಳ್ಳತನ (ಚೈನ್ ಸ್ಟಾಚಿಂಗ್) ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಪ್ರಕರಣಗಳನ್ನೂ ಭೇದಿಸಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page