May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪೆರುವಾಯಿಯಲ್ಲಿ ಬಂಧುತ್ವ ಕ್ರಿಸ್ಮಸ್–2025 – ಬೃಹತ್ ರಕ್ತದಾನ ಶಿಬಿರದ ಮೂಲಕ ಮಾನವೀಯತೆಯ ಸಂದೇಶ

ಒಬ್ಬರ ಜೀವ ಉಳಿಸುವ ಪುಣ್ಯಕ್ಕಿಂತ ದೊಡ್ಡ ಬಂಧುತ್ವ ಮತ್ತೊಂದಿಲ್ಲ – ಫಾದರ್ ಸೈಮನ್ ಡಿಸೋಜ

ಒಬ್ಬರ ಜೀವ ಉಳಿಸುವ ಪುಣ್ಯಕ್ಕಿಂತ ದೊಡ್ಡ ಬಂಧುತ್ವ ಮತ್ತು ಸಹೋದರತ್ವ ಮತ್ತೊಂದಿಲ್ಲ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ಅವರು ಹೇಳಿದರು. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಮುಚ್ಚಿರಪದವಿನಲ್ಲಿ ಫಾತಿಮಾ ಮಾತೆಯ ದೇವಾಲಯದ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ, ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ–ಮಾಣಿಲ, ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಘ ಮುರುವ–ಮಾಣಿಲ ಹಾಗೂ ಟಾಸ್ಕ್ ಬಳಗ ಪೆರುವಾಯಿ ಇವರ ಜಂಟಿ ಆಶ್ರಯದಲ್ಲಿ ಬಂಧುತ್ವ ಕ್ರಿಸ್ಮಸ್–2025 ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಂದನೀಯ ಫಾದರ್ ಸೈಮನ್ ಡಿಸೋಜ ಅವರು, ಕತ್ತಲೆ, ಪಾಪ, ಅಹಂಕಾರ ಮತ್ತು ಮೌಢ್ಯದಲ್ಲಿದ್ದ ಮಾನವಕುಲಕ್ಕೆ ಬೆಳಕು, ರಕ್ಷಣೆ ಮತ್ತು ಬಿಡುಗಡೆ ನೀಡಲು ದೇವರು ತಮ್ಮ ಪುತ್ರನನ್ನೇ ಜಗತ್ತಿಗೆ ನೀಡಿದರು. ದೇವರು ಎಲ್ಲವನ್ನೂ ನಮಗೆ ನೀಡಿದಾಗ, ನಾವೂ ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಚಿಂತನೆಯಿಂದ ಸರ್ವಧರ್ಮೀಯರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಕ್ತದಾನ ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಮಹೋತ್ಸವವಾಗಿದೆ. ನಮ್ಮ ರಕ್ತ ಯಾರ ಜೀವ ಉಳಿಸಲಿದೆ ಎಂಬುದು ನಮಗೆ ಗೊತ್ತಿರದು; ಆದರೆ ಒಂದು ಜೀವ ಉಳಿಯುತ್ತದೆ ಎಂಬ ಸಂತೋಷವೇ ರಕ್ತದಾನದ ಮಹತ್ವ. ಇದೇ ನಿಜವಾದ ಬಂಧುತ್ವ, ಇದೇ ನಿಜವಾದ ಭ್ರಾತೃತ್ವ ಮತ್ತು ಸಹೋದರತ್ವ ಎಂದು ಅವರು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಯ್ಯದ್ ಹಬೀಬುಲ್ಲಾ ಪೂಕೋಯ ತಂಙಲ್ ಪೆರುವಾಯಿ ಅವರು, ಇದು ಅತ್ಯಂತ ವಿಶಿಷ್ಟ ಮತ್ತು ಸಕಾಲಿಕ ಕಾರ್ಯಕ್ರಮವಾಗಿದೆ ಎಂದರು. ಯೇಸು ಕ್ರಿಸ್ತನನ್ನು ಕ್ರೈಸ್ತರು ಮಾತ್ರವಲ್ಲ, ಮುಸಲ್ಮಾನರೂ ಗೌರವಿಸುತ್ತಾರೆ. ನಮ್ಮ ಧರ್ಮದಲ್ಲಿಯೂ ಯೇಸು ಕ್ರಿಸ್ತರಿಗೆ ಮಹತ್ವದ ಸ್ಥಾನವಿದೆ. ಅವರ ಹೆಸರಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಸಂತಸದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ದಾನಗಳಲ್ಲಿ ಶ್ರೇಷ್ಠವಾದದ್ದು ಮತ್ತೊಬ್ಬರಿಗೆ ಬದುಕು ನೀಡುವ ದಾನ. ರಕ್ತದಾನಕ್ಕೆ ಜಾತಿ, ಧರ್ಮ ಎಂಬ ಬೇಧವಿಲ್ಲ. ರಕ್ತವನ್ನು ವೈಜ್ಞಾನಿಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಪ್ರಾರ್ಥನೆಯ ದಾನಕ್ಕಿಂತ ಕೈಗಳಿಂದ ನೀಡುವ ದಾನ ಶ್ರೇಷ್ಠ ಎಂಬ ಮಾತಿನಂತೆ, ನಮ್ಮ ನರನಾಡಿಗಳಲ್ಲಿ ಹರಿಯುವ ರಕ್ತವನ್ನು ಮತ್ತೊಬ್ಬರ ಜೀವ ಉಳಿಸಲು ನೀಡುವುದಕ್ಕಿಂತ ದೊಡ್ಡ ಕಾಣಿಕೆ ಇನ್ನಿಲ್ಲ ಎಂದು ಹೇಳಿದರು. ಸಮಾಜದಲ್ಲಿ ಧರ್ಮದ ಗೋಡೆಗಳನ್ನು ನಿರ್ಮಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಧರ್ಮಗಳ ನಡುವೆ ನಡೆಯುವ ಸಂಶಯ ಮತ್ತು ಅಸಹಿಷ್ಣುತೆಯ ಈ ಕಾಲಘಟ್ಟದಲ್ಲಿ ಇಂತಹ ಬಂಧುತ್ವ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸರ್ವಧರ್ಮೀಯರಿಗೆ ಚರ್ಚ್ ಮತ್ತು ಸ್ತ್ರೀ ಸಂಘಟನೆಯ ವತಿಯಿಂದ ಕುಸ್ವಾರ್ ವಿತರಿಸಲಾಯಿತು. 40ಕ್ಕೂ ಅಧಿಕ ಮಂದಿ ರಕ್ತದಾನದಲ್ಲಿ ಭಾಗವಹಿಸಿದರು. ಮಕ್ಕಳಿಂದ ಅಭಿನಯ ಹಾಗೂ ಕ್ಯಾರಲ್ಸ್ ಗಾಯನದ ಮೂಲಕ ಕ್ರಿಸ್ಮಸ್ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸರ್ವ ಆಯೋಗಗಳ ಸಂಚಾಲಕ ರಾಲ್ಫ್ ಡಿಸೋಜ, ಸ್ತ್ರೀ ಸಂಘಟನೆಯ ಘಟಕ ಅಧ್ಯಕ್ಷೆ ರೇಷ್ಮಾ ಡಿಸೋಜ, ಐಸಿವೈಎಂ ಘಟಕ ಅಧ್ಯಕ್ಷ ಸ್ಟ್ಯಾನಿ ಡಿಸೋಜ, ಟಾಸ್ಕ್ ಸಂಘಟನೆ ಗೌರವ ಅಧ್ಯಕ್ಷ ಹಮೀದ್ ಹಾಜಿ ದರ್ಖಾಸ್, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ–ಮಾಣಿಲ ಸ್ಥಾಪಕ ರವಿಚಂದ್ರ ಕುಲಾಲ್, ಹ್ಯುಮ್ಯಾನಿಟಿ ಅಭಿಮಾನಿ ಬಳಗದ ಮೌರಿಸ್ ಡಿಸೋಜ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಸಂಪರ್ಕಾಧಿಕಾರಿ ಡಾ. ಶೇಖ್ ಇಕ್ಬಾಲ್ ಹುಸೇನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page