July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತೂರಿನಲ್ಲಿ ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖೀ ಸೂಸಿದ ಸೌಗಂಧ” ಕೃತಿ ಲೋಕಾರ್ಪಣೆ – ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ

ಪುತ್ತೂರಿನ ದರ್ಬೆಯಲ್ಲಿರುವ ಸಂತ ಫಿಲೋಮಿನಾ ಸಿಲ್ವರ್ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ 2025 ಡಿಸೆಂಬರ್ 28ರಂದು ಭಾನುವಾರ ನಿರಂತರ ಪ್ರಕಾಶನ ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಜೇಂದ್ರಗಡ (ಗದಗ) ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪುತ್ತೂರಿನ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖೀ ಸೂಸಿದ ಸೌಗಂಧ” ಕೃತಿಯ ಲೋಕಾರ್ಪಣೆ ಹಾಗೂ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಭವ್ಯವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರಂತರ ಪ್ರಕಾಶನದ ರೂವಾರಿ ಎ.ಎಸ್. ಮಕಾನದಾರ ವಹಿಸಿದ್ದರು. ಹಿರಿಯ ವಕೀಲರು, ಲೇಖಕರು ಹಾಗೂ ಸಂಘಟಕರಾದ ವಿ. ಪುರಂದರ ಭಟ್ ಅವರು ಚೆಂಡೆ ನಿನಾದದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಹತ್ತುಕ್ಕೂ ಹೆಚ್ಚು ಕವಿಗಳು ತಮ್ಮ ವೈಶಿಷ್ಟ್ಯಮಯ ಚುಟುಕುಗಳನ್ನು ವಾಚಿಸಿ ಸಭಿಕರ ಮನಸೂರೆಗೊಳಿಸಿದರು.

ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿಗೆ ವಿಟ್ಲ ಅರಸು ಮನೆತನದ ಕುಡಿ ಹಾಗೂ ಉಪನ್ಯಾಸಕರಾದ ರಾಜಾರಾಮ್ ವರ್ಮಾ ಅವರು ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದರು. ಕನ್ನಡ, ಕೊಂಕಣಿ, ತುಳು, ಹಿಂದಿ, ಬ್ಯಾರಿ, ಪಟ್ಟಿಗಾರ ಹಾಗೂ ಮರಾಠಿ ಭಾಷೆಗಳ ಕವಿಗಳು ತಮ್ಮ ಕವಿತಾ ವಾಚನದ ಮೂಲಕ ಸಾಹಿತ್ಯ ಸೌರಭವನ್ನು ಹರಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ, ಸಾಹಿತ್ಯಿಕರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಅವರು ಸಾಹಿತ್ಯ ಸೇವೆಯ ಮಹತ್ವವನ್ನು ಒತ್ತಿಹೇಳಿದರು.

ಬಹುಭಾಷಾ ಕವಿ ಹಾಗೂ ಚಲನಚಿತ್ರ ನಟ ಮುಹಮ್ಮದ್ ಬಡ್ದೂರು ಅವರು “ಸಖೀ ಸೂಸಿದ ಸೌಗಂಧ” ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕೃತಿಯ ವಿಶಿಷ್ಟ ಶೈಲಿಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಫ್ಲಾವಿಯಾ ಅಲ್ಬುಕರ್ಕ್ ಅವರಿಗೆ ನಿರಂತರ ಸಾಹಿತ್ಯ ಪುರಸ್ಕಾರವನ್ನು ಎ.ಎಸ್. ಮಕಾನದಾರ ಅವರು ಪ್ರದಾನಿಸಿದರು.

ಕಾರ್ಯಕ್ರಮದಲ್ಲಿ ಕೃತಿ ಪರಿಚಯ, ಪ್ರಶಸ್ತಿ ಕುರಿತು ವಿಚಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಹಾಗೂ ಪದ್ಯಬಂಡಿ ಮೂಲಕ ಸಾಹಿತ್ಯ–ಸಂಸ್ಕೃತಿಯ ಸಂಭ್ರಮ ಮೂಡಿಬಂದಿತು. ಬೆಳಗಿನ ಉಪಹಾರದಿಂದ ಆರಂಭವಾದ ಈ ಕಾರ್ಯಕ್ರಮ ಮಧ್ಯಾಹ್ನದ ಸಹಭೋಜನದೊಂದಿಗೆ ಸಮಾಪ್ತಿಯಾಯಿತು. ಒಟ್ಟಾರೆ ಸಾಹಿತ್ಯೋತ್ಸವ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಕಾರ್ಯಕ್ರಮದ ಯಶಸ್ಸಿಗೆ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಹಾಗೂ ಅವರ ಕುಟುಂಬದ ಸದಸ್ಯರು ಸಂಪೂರ್ಣ ಸಹಕಾರ ನೀಡಿದರು. ಈ ಭವ್ಯ ಕಾರ್ಯಕ್ರಮಕ್ಕೆ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿವರಗಳು:

* ಪ್ರಾರ್ಥನೆ: ವೀಕ್ಷಾ ಮತ್ತು ಮೈತ್ರಿ

* ಸ್ವಾಗತ: ಡಾ. ಅಮೃತ ರಶ್ಮಿ ಫೆರ್ನಾಂಡಿಸ್

* ನಿರೂಪಣೆ: ಕುಮುದಾಕ್ಷಿ

* ವಂದನಾರ್ಪಣೆ: ಸೌಮ್ಯ

ನೃತ್ಯ : ರೆನಿಷಾ ಮತ್ತು ರಿಶಿತಾ

ಪದ್ಯಬಂಡಿ : ಸಂತ ಅಲೋಶಿಯಸ್ ಕಾಲೆಜು ಮಂಗಳೂರಿನ ವಿದ್ಯಾರ್ಥಿಗಳು

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page