July 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ 125ನೇ ಚರ್ಚ್ ಆಗಿ ಬೆಳ್ಳಾರೆ ಪವಿತ್ರ ಶಿಲುಬೆಯ ಚರ್ಚ್ – ಬಿಷಪ್ ಪೀಟರ್ ಪಾವ್ಲ್ ಘೋಷಣೆ

ಮೊದಲ ‘ಚರ್ಚ್ ಧರ್ಮಗುರು’ ಆಗಿ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ನೇಮಕ

ಮಂಗಳೂರು ಧರ್ಮಕ್ಷೇತ್ರದ ಧಾರ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಬಹುದಾದ ದಿನವಾಗಿ, ಬೆಳ್ಳಾರೆ ಪವಿತ್ರ ಶಿಲುಬೆ ಚಾಪೆಲ್‌ ಅಧಿಕೃತವಾಗಿ ‘ಚರ್ಚ್’ ಸ್ಥಾನಮಾನವನ್ನು ಪಡೆದಿತು. ಈ ಐತಿಹಾಸಿಕ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಪವಿತ್ರ ಶಿಲುಬೆ ದೇವಾಲಯದಲ್ಲಿ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿ, ಚರ್ಚ್ ನಿಯಮಾನುಸಾರವಾಗಿ ಬೆಳ್ಳಾರೆ ಪವಿತ್ರ ಶಿಲುಬೆ ದೇವಾಲಯವನ್ನು ‘ಚರ್ಚ್’ ಎಂದು ಘೋಷಿಸಿದರು. ಇದರಿಂದ ಈ ದೇವಾಲಯವು ಮಂಗಳೂರು ಧರ್ಮಕ್ಷೇತ್ರದ 125ನೇ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪವಿತ್ರ ಬಲಿಪೂಜೆಯ ವೇಳೆ ಘೋಷಿಸಲಾದ ಈ ಚರ್ಚ್ ಸ್ಥಾಪನೆಗೆ ಅನೇಕ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಾವಿರಾರು ಭಕ್ತಾದಿಗಳು ಭಕ್ತಿಭಾವ ಮತ್ತು ಆನಂದದಿಂದ ಭಾಗವಹಿಸಿ ಸಾಕ್ಷಿಯಾದರು.

ಅಭಿನಂದನಾ ಸಮಾರಂಭ:

ಬಲಿಪೂಜೆಯ ನಂತರ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ತಮ್ಮ ಸಂದೇಶದಲ್ಲಿ, ಹಿಂದಿನ ದಿನಗಳಲ್ಲಿ ಬೆಳ್ಳಾರೆ ಭಾಗದ ಕ್ರೈಸ್ತ ಭಕ್ತರು ಧಾರ್ಮಿಕ ಆಚರಣೆಗಾಗಿ ಸುಮಾರು 15 ಕಿ.ಮೀ. ದೂರದ ಪಂಜಾ ದೇವಾಲಯಕ್ಕೆ ಪ್ರಯಾಣಿಸಬೇಕಾಗಿದ್ದ ಸಂಕಷ್ಟಗಳನ್ನು ಸ್ಮರಿಸಿದರು. ಇದೇ ಅಗತ್ಯವು ಬೆಳ್ಳಾರೆಯಲ್ಲಿ ಪ್ರಾರ್ಥನಾ ಕೇಂದ್ರ ಸ್ಥಾಪನೆಗೆ ಕಾರಣವಾಗಿ, ಅದು ಹಂತ ಹಂತವಾಗಿ ಚಾಪೆಲ್ ಆಗಿ, ಇದೀಗ ಚರ್ಚ್ ಸ್ಥಾನಮಾನವನ್ನು ಪಡೆದಿದೆ ಎಂದು ಅವರು ವಿವರಿಸಿದರು.

ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, 54 ವರ್ಷಗಳ ಹಿಂದೆ ಬಿತ್ತಲಾದ ನಂಬಿಕೆಯ ಬೀಜ ಇಂದು ಫಲವತ್ತಾದ ಧರ್ಮಕೇಂದ್ರದ ರೂಪದಲ್ಲಿ ಬೆಳೆಯುತ್ತಿರುವುದು ದೇವರ ಕೃಪೆಯ ಸಂಕೇತ ಎಂದರು. ಬೆಳ್ಳಾರೆ ಪವಿತ್ರ ಶಿಲುಬೆ ದೇವಾಲಯವನ್ನು 125ನೇ ಚರ್ಚ್ ಎಂದು ಘೋಷಿಸಿದ ಧರ್ಮಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿ, ಪಂಜಾ ಸೈಂಟ್ ರೀಟಾ ದೇವಾಲಯದ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ಡಿಸೋಜ ಅವರ ಮಾರ್ಗದರ್ಶನ ಮತ್ತು ನೂತನ ಚರ್ಚ್ ಧರ್ಮಗುರು ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರ ಸಮರ್ಪಿತ ಸೇವೆಯನ್ನು ಶ್ಲಾಘಿಸಿದರು.

ನೂತನ ಚರ್ಚ್ ಧರ್ಮಗುರುಗಳಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಗಣ್ಯ ಅತಿಥಿಗಳು ಹಾಗೂ ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಪಂಜಾ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲ್ಯಾನ್ಸಿ ಡಿಸೋಜ ಹಾಗೂ ಬೆಳ್ಳಾರೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನಿಲ್ ಡಿಸೋಜ ಉಪಸ್ಥಿತರಿದ್ದರು. ಫಾದರ್ ಮೆಲ್ವಿನ್ ಡಿಸೋಜ ಅವರು ವಂದನಾರ್ಪಣೆ ಸಲ್ಲಿಸಿದರು.

ಈ ಭವ್ಯ ಸಮಾರಂಭದಲ್ಲಿ ವಂದನೀಯ ಫಾದರ್ ಜೆರಾಲ್ಡ್ ಡಿಸೋಜ, ವಂದನೀಯ ಫಾದರ್ ಸಂತೋಷ್ ಮಿನೇಜಸ್, ವಂದನೀಯ ಫಾದರ್ ಆಲ್ವಿನ್ ಡಿಕುನ್ಹಾ, ವಂದನೀಯ ಫಾದರ್ ಮರ್ವಿನ್ ಲೋಬೋ, ವಂದನೀಯ ಫಾದರ್ ಬಾಲ್ತಝರ್ ಪಿಂಟೋ, ವಂದನೀಯ ಫಾದರ್ ಜೆ.ಬಿ. ಮೊರಾಸ್, ವಂದನೀಯ ಫಾದರ್ ಅಬೆಲ್ ಲೋಬೋ, ವಂದನೀಯ ಫಾದರ್ ಅಮಿತ್ ರೊಡ್ರಿಗಸ್, ವಂದನೀಯ ಫಾದರ್ ಪಾವ್ಲ್ ಸೆಬೆಸ್ಟಿಯನ್ ಡಿಸೋಜ, ವಂದನೀಯ ಫಾದರ್ ವಿಜಯ್ ಲೋಬೋ, ವಂದನೀಯ ಫಾದರ್ ರಿತೇಶ್ ರೊಡ್ರಿಗಸ್ ಸೇರಿದಂತೆ ಅನೇಕ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಅಪಾರ ಸಂಖ್ಯೆಯ ಕ್ರೈಸ್ತ ಭಕ್ತಾಧಿಗಳು ಭಾಗವಹಿಸಿದ್ದರು.

ನಂಬಿಕೆಯ ಪಯಣ – ಪಂಜಾ ಮಿಷನ್‌ನಿಂದ ಚರ್ಚ್ ವರೆಗೆ:

ಒಮ್ಮೆ ಕಡಬ ಮಿಷನ್‌ನ ಭಾಗವಾಗಿದ್ದ ಪಂಜಾ ಮತ್ತು ಬೆಳ್ಳಾರೆ ಪ್ರದೇಶಗಳು, 1932ರಲ್ಲಿ ಡಾ. ಪೀಟರ್ ಪಾವ್ಲ್ ಪಿಂಟೋ ಅವರ ಸೇವೆಯಿಂದ ಸಂಘಟಿತ ಧಾರ್ಮಿಕ ಜೀವನಕ್ಕೆ ದಾರಿ ಕಂಡವು. 1971ರಲ್ಲಿ ಮನೆಮಠಗಳಲ್ಲಿ ಆರಂಭವಾದ ಪೂಜಾ ಆಚರಣೆಗಳು, ಬಳಿಕ 3.29 ಎಕರೆ ಭೂಮಿಯಲ್ಲಿ ಶಾಶ್ವತ ಚಾಪೆಲ್ ನಿರ್ಮಾಣಕ್ಕೆ ಕಾರಣವಾಯಿತು. 2014ರಲ್ಲಿ ಧರ್ಮಗುರುಗಳ ನಿವಾಸ ನಿರ್ಮಾಣಗೊಂಡು ಆಡಳಿತಾತ್ಮಕ ಬಲ ದೊರಕಿತು. 2018ರಲ್ಲಿ ಆಡಳಿತಾತ್ಮಕ ಸ್ವಾಯತ್ತತೆ, 2025ರಲ್ಲಿ ಸ್ವತಂತ್ರ ಚರ್ಚ್ ಪ್ರದೇಶ ರಚನೆ ಹಾಗೂ 2026ರಲ್ಲಿ ಚರ್ಚ್ ಘೋಷಣೆ — ಈ ಎಲ್ಲ ಹಂತಗಳು ಬೆಳ್ಳಾರೆ ಪವಿತ್ರ ಶಿಲುಬೆ ಧರ್ಮಕೇಂದ್ರದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ.

ಹೊಸ ಅಧ್ಯಾಯ, ಹೊಸ ಭರವಸೆ:

ನೂತನ ಚರ್ಚ್ ಇದರ ಮೊದಲ ಧರ್ಮಗುರು ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರ ನೇತೃತ್ವದಲ್ಲಿ ಬೆಳ್ಳಾರೆ ಪವಿತ್ರ ಶಿಲುಬೆ ಧರ್ಮಕೇಂದ್ರವು ಇಂದು ಸಂಘಟನೆ, ಧಾರ್ಮಿಕ ಜೀವನ, ಸಮುದಾಯ ಸೇವೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ನಿರಂತರ ಪ್ರಗತಿಯತ್ತ ಸಾಗುತ್ತಿದ್ದು, ನಂಬಿಕೆ, ತ್ಯಾಗ ಮತ್ತು ಏಕತೆಯ ಜೀವಂತ ಸಾಕ್ಷಿಯಾಗಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ.

You may also like

News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale
News

ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಹಾಗೂ ಸಿಪಿಆರ್ ತರಬೇತಿ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ರೊಜಾರಿಯೊ ಕ್ಯಾಥೆಡ್ರಲ್‌ನ ಆರೋಗ್ಯ ಆಯೋಗವು ಚರ್ಚ್ ಪಾಲನಾ ಸಮಿತಿಯ 21 ಆಯೋಗಗಳ ಸಹಯೋಗದಲ್ಲಿ “A Healthy Heart for a Blessed Life”

You cannot copy content of this page