July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಗರ್ನಾಡ್ ಚರ್ಚ್ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ವಿಜೃಂಭಣೆಯಿಂದ ಸಮಾರೋಪ

“ಎಲ್ಲ ವರ್ಗದ ಜನರು ಸದಾ ಒಗ್ಗಟ್ಟಿನಿಂದ ಬದುಕಬೇಕು” – ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು ಧರ್ಮಕ್ಷೇತ್ರದ ಅಮ್ಟೂರು ಕರಿಂಗಾಣದ ಮೊಗರ್ನಾಡ್ ದೇವ ಮಾತಾ ಧರ್ಮಕೇಂದ್ರದ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವು 2026 ಜನವರಿ 1ರಂದು ಗುರುವಾರ ಅತ್ಯಂತ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಹಿಸಿದ್ದರು. ಅವರು ತಮ್ಮ ಸಂದೇಶದಲ್ಲಿ, ಜ್ಯುಬಿಲಿ ಆಚರಣೆಯನ್ನು ಯಶಸ್ವಿಯಾಗಿ ನಡೆಸಿದ ಮೊಗರ್ನಾಡ್ ಚರ್ಚ್‌ನ ಧರ್ಮಗುರುಗಳು, ಧರ್ಮಭಗಿನಿಯರು, ಪಾಲನಾ ಸಮಿತಿ, ಆರ್ಥಿಕ ಸಮಿತಿ, ಜ್ಯುಬಿಲಿ ಸಮಿತಿ ಹಾಗೂ ಭಕ್ತಾಧಿಗಳನ್ನು ಅಭಿನಂದಿಸಿ, “ಎಲ್ಲ ವರ್ಗದ ಜನರು ಸದಾ ಒಗ್ಗಟ್ಟಿನಿಂದ ಬದುಕುವ ಮನೋಭಾವವನ್ನು ಬೆಳೆಸಬೇಕು” ಎಂದು ಕರೆ ನೀಡಿದರು.

ಜ್ಯುಬಿಲಿ ಆಚರಣೆಯ ಅಂಗವಾಗಿ ಡಿಸೆಂಬರ್ 29ರಂದು ದಾನಿಗಳು ಹಾಗೂ ಭಕ್ತಾಭಿಮಾನಿಗಳಿಗಾಗಿ ವಿಶೇಷ ದಿವ್ಯ ಬಲಿ ಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ಮಂಗಳ ಜ್ಯೋತಿಯ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೊಸ್ತ ಅವರು ನೆರವೇರಿಸಿದರು. ಡಿಸೆಂಬರ್ 30ರಂದು ಧರ್ಮಕೇಂದ್ರದ ಪೂರ್ವಜರ ಆತ್ಮಶಾಂತಿಗಾಗಿ ದಿವ್ಯ ಬಲಿ ಪೂಜೆ ನಡೆಯಿತು. ಈ ಬಲಿಪೂಜೆಯನ್ನು ಧರ್ಮಾಧ್ಯಕ್ಷರ ಪಾಲನಾ ಆಯೋಗದ ಪ್ರಧಾನ ಸಂಯೋಜಕರಾದ ಅತೀ ವಂದನೀಯ ಫಾದರ್ ನವೀನ್ ಪಿಂಟೊ ಅವರು ಪ್ರಧಾನ ಧರ್ಮಗುರುಗಳಾಗಿ ನೆರವೇರಿಸಿದರು. ನಂತರ ಚರ್ಚ್ ಸ್ಮಶಾನದಲ್ಲಿ ಪುನರುತ್ಥಾನದ ಏಸುಕ್ರಿಸ್ತನ ಮೂರ್ತಿಯನ್ನು ವಿಲಿಯಂ ಲೋಬೊ ಹಾಗೂ ಹೆಲೆನ್ ಲೋಬೊ ಅವರು ಅನಾವರಣಗೊಳಿಸಿದರು.

ಡಿಸೆಂಬರ್ 31ರಂದು ಮೊಗರ್ನಾಡ್ ಧರ್ಮಕೇಂದ್ರದ ವ್ಯಾಪ್ತಿಯ ಸುಮಾರು 103 ಮಕ್ಕಳಿಗೆ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪವಿತ್ರ ದೃಢೀಕರಣದ ಸಂಸ್ಕಾರವನ್ನು ನೀಡಿದರು. ಜ್ಯುಬಿಲಿಯ ಮೊದಲ ದಿನ ಆಶೀರ್ವದಿಸಲಾದ ಮಾತೆ ಮರಿಯಮ್ಮ ಹಾಗೂ ಪವಿತ್ರ ಶಿಲುಬೆಯನ್ನು ಐದು ವಲಯಗಳ ಮುಖ್ಯಸ್ಥರು ಧರ್ಮಾಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಮಾರೋಪ ಸಮಾರಂಭದಲ್ಲಿ ಮೊಗರ್ನಾಡ್ ಚರ್ಚ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಧರ್ಮಗುರುಗಳು, ಹಳೆಯ ಹಾಗೂ ಪ್ರಸ್ತುತ ಪಾಲನಾ ಸಮಿತಿಯ ಪದಾಧಿಕಾರಿಗಳು, ಆರ್ಥಿಕ ಸಮಿತಿಯ ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ವಾರ್ಡಿನ ಗುರಿಕಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಧರ್ಮಭಗಿನಿಯರು, ದೇವಾಲಯದ ಸಿಬ್ಬಂದಿ, ದಾನಿಗಳು ಹಾಗೂ ಗಣ್ಯ ಅತಿಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜ್ಯುಬಿಲಿ ಗೀತೆಯ ಗಾಯನ, ಒಂದು ವರ್ಷದ ಕಾರ್ಯಕ್ರಮಗಳ ವೀಡಿಯೋ ಪ್ರದರ್ಶನ, ಜ್ಯುಬಿಲಿ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ 250ನೇ ಜ್ಯುಬಿಲಿಯ ಸ್ಮರಣಾರ್ಥ ಸುವಿನಿಯರ್ ಪುಸ್ತಕದ ಬಿಡುಗಡೆ ನಡೆಯಿತು. ಸುಮಾರು 250 ಮಹಿಳೆಯರು ಧರ್ಮಾಧ್ಯಕ್ಷರಿಗೆ ಅದ್ದೂರಿ ಸ್ವಾಗತ ಕೋರಿದರು. ಸಮಾರಂಭದಲ್ಲಿ ಸುಮಾರು 75 ಧರ್ಮಗುರುಗಳು ಹಾಗೂ 60ಕ್ಕೂ ಅಧಿಕ ಧರ್ಮಭಗಿನಿಯರು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್, ದಕ್ಷಿಣ ಏಶಿಯಾದ ಜೆಸ್ವೀಟ್ ಮೇಳದ ಪ್ರೊವಿನ್ಸಿಯಲ್ ಅತೀ ವಂದನೀಯ ಡಾ. ಸ್ಟ್ಯಾನಿ ಡಿಸೋಜ, ಅರ್ಸುಲಾಯ್ನ್ ಸಿಸ್ಟರ್ ಮೇಳದ ಮಂಗಳೂರು ಪ್ರಾಂತ್ಯದ ಪ್ರೊವಿನ್ಸಿಯಲ್ ಅತೀ ವಂದನೀಯ ಸಿಸ್ಟರ್ ಕ್ಲಾರಾ ಮಿನೇಜಸ್ ಉಪಸ್ಥಿತರಿದ್ದರು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಅವರು ಸ್ವಾಗತಿಸಿದರು. ನವೀನ್ ರಾಜೇಶ್ ಡಿಕುನ್ಹಾ ವಂದನಾರ್ಪಣೆ ಸಲ್ಲಿಸಿದರು. ರೆನ್ನಿ ಫೆರ್ನಾಂಡಿಸ್, ಕ್ಯಾರಲ್ ಕ್ರಾಸ್ತಾ ಮತ್ತು ಸತೀಶ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮಾಂಡ್ ಸೊಭಾಣ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page