April 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಗ್ರಿಲೀಫ್ ಸಂಸ್ಥೆಯಿಂದ ‘ರೈತರ ಜೊತೆ ವಿಶ್ವದ ಕಡೆ 2026’ – ನಿಡ್ಲೆ ಬರಂಗಾಯದಲ್ಲಿ ರೈತ–ಸಂಸ್ಥೆ ಸಮನ್ವಯ ಸಭೆ

ತೆಂಗು, ಅಡಿಕೆ, ಭತ್ತ ಮೊದಲಾದ ಕೃಷಿಗಳಲ್ಲಿ ಇಳುವರಿಗಿಂತಲೂ ಅವುಗಳಿಂದ ಉತ್ಪತ್ತಿಯಾಗುವ ಸಿಪ್ಪೆ, ಗೆರಟೆ, ಸೋಗೆ, ಹಾಳೆ ಮೊದಲಾದ ತ್ಯಾಜ್ಯಗಳಿಗೆ ಇತ್ತೀಚೆಗೆ ಹೆಚ್ಚಿನ ಬೇಡಿಕೆ ಮತ್ತು ಮೌಲ್ಯ ಹೆಚ್ಚುತ್ತಿರುವುದು ಕೃಷಿ ಕ್ಷೇತ್ರಕ್ಕೆ ಹೊಸ ಅವಕಾಶಗಳನ್ನು ತಂದಿದೆ ಎಂದು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಹೇಳಿದರು.

ಅವರು ಜನವರಿ 3ರಂದು ಶನಿವಾರ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬರಂಗಾಯದಲ್ಲಿ ಅಗ್ರಿಲೀಫ್ ಸಂಸ್ಥೆಯ ಆಶ್ರಯದಲ್ಲಿ ಹೋಟೆಲ್ ಆದಿತ್ಯ ಪಂಚವಟಿ ಸಭಾಭವನದಲ್ಲಿ “ರೈತರ ಜೊತೆ ವಿಶ್ವದ ಕಡೆ 2026” ತತ್ವದಡಿ ಆಯೋಜಿಸಲಾದ “ರೈತ–ಸಂಸ್ಥೆ ಸಮನ್ವಯ ಸಭೆ” ಯಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಅಡಿಕೆ ಮರದ ಹಾಳೆಯಿಂದ ತಯಾರಿಸಿದ ತಟ್ಟೆಗಳಲ್ಲಿ ಇಂದು ಶ್ರೀಮಂತರು ಹಾಗೂ ಪ್ರತಿಷ್ಠಿತರು ಊಟೋಪಚಾರ ಮಾಡುತ್ತಿದ್ದು, ಇದು ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕವಾಗಿದೆ ಎಂದು ಹೇಳಿದರು. ಹಿಂದಿನ ಕಾಲದಲ್ಲಿ ಅಡಿಕೆ ಹಾಳೆಯಿಂದ ತಯಾರಿಸಿದ “ಕಿಲ್ಲಿ” ಯಲ್ಲಿ ಊಟ ಮಾಡುವ ಸಂಪ್ರದಾಯವಿದ್ದುದನ್ನು ಸ್ಮರಿಸಿ, ಇಂದಿನ ವಿಜ್ಞಾನಿಗಳು ಅಡಿಕೆ ಹಾಳೆಯಿಂದ ಮೊಬೈಲ್ ಕವಚ, ಸೂಟ್‌ಕೇಸ್, ಪಾದರಕ್ಷೆ ಹಾಗೂ ಆಕರ್ಷಕ ಕಲಾಕೃತಿಗಳನ್ನು ತಯಾರಿಸುವ ಸಾಧ್ಯತೆ ಕಂಡುಹಿಡಿದಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳು ಪ್ರಕೃತಿಯೊಂದಿಗೆ ಅಭಿವೃದ್ಧಿಯಾದಾಗ ಮಾತ್ರ ನಗರಗಳಿಗೆ ವಲಸೆ ಹೋದ ರೈತಾಪಿ ಜನರು ಮತ್ತೆ ಹಳ್ಳಿಗಳತ್ತ ಮರಳುತ್ತಾರೆ. ಈ ದಿಕ್ಕಿನಲ್ಲಿ ಕಳೆದ ಆರು ವರ್ಷಗಳಿಂದ ಅಗ್ರಿಲೀಫ್ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ ಎಂದು ಅವರು ಸಂಸ್ಥೆಯನ್ನು ಅಭಿನಂದಿಸಿದರು.

ಅಧಿಕ ಕೀಟನಾಶಕಗಳು ಮತ್ತು ರಾಸಾಯನಿಕ ಔಷಧಿಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಟ್ಟಿದ್ದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಉದ್ಯಮಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಹೇಳಿದರು. ಇದರಿಂದ ಸ್ಥಳೀಯ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗಿ, ನಗರಗಳತ್ತ ವಲಸೆ ಹೋಗುವ ಪ್ರವೃತ್ತಿ ಕಡಿಮೆಯಾಗುತ್ತದೆ ಎಂದರು.

ಕರ್ನಾಟಕ ಅತಿ ಹೆಚ್ಚು ಬರಪೀಡಿತ ರಾಜ್ಯವಾಗಿದ್ದು, ಬಿಲ್ವ ಮತ್ತು ಬೇಲದ ಹಣ್ಣಿನ ಕೃಷಿ ನೀರಿನ ಸಂಪನ್ಮೂಲ ಸಂರಕ್ಷಣೆಗೆ ವರದಾನವಾಗಿದೆ ಎಂದು ತಿಳಿಸಿದರು. ಅಗ್ರಿಲೀಫ್ ಸಂಸ್ಥೆಯ ಮೂಲಕ ಅಡಿಕೆ ಹಾಳೆ ತಟ್ಟೆ ತಯಾರಿಕಾ ಉದ್ಯಮ ಆರಂಭಿಸಿ ಯಶಸ್ವಿಯಾದ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರ ಸೇವೆ–ಸಾಧನೆಯನ್ನು ಶ್ಲಾಘಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಅನಂತ ಭಟ್ ಮಚ್ಚಿಮಲೆ ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್. ಚಂದ್ರಶೇಖರ್ ಅವರು ಸಂಸ್ಥೆ ಮತ್ತು ರೈತರಿಗೆ ಸಾಂದರ್ಭಿಕ ಸಲಹೆಗಳನ್ನು ನೀಡಿದರು.

ಹಾಳೆತಟ್ಟೆ ಸಂಗ್ರಹದಲ್ಲಿ ವಿಶೇಷ ಸಾಧನೆ ಮಾಡಿದ ಲೋಕಯ್ಯ ಗೌಡ (ಕೊಯ್ಯೂರು), ಬಾಬು ಸುಳ್ಯೋಡಿ, ಪ್ರೇಮ ಕರಾಯ, ನಂದಿನಿ ಕುದ್ರಡ್ಕ ಹಾಗೂ ನಿರಂಜನ ಗೌಡ ಬಂದಾರು ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ನಂದಿನಿ ಕುದ್ರಡ್ಕ ಮತ್ತು ನಿರಂಜನ ಗೌಡ ಬಂದಾರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವಿನಾಶ್ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅತಿಶಯ ಜೈನ್ ಧನ್ಯವಾದ ಸಲ್ಲಿಸಿದರು. ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರ್ವಹಿಸಿದರು.

You may also like

News

ಮಂಗಳೂರು SSVP ಇತಿಹಾಸದಲ್ಲಿ ಹೊಸ ಅಧ್ಯಾಯ – ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪ್ರೀತಾ ಲೋಬೊ ಅಧಿಕಾರ ಸ್ವೀಕಾರ

ಸೈಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಸೆಂಟ್ರಲ್ ಕೌನ್ಸಿಲ್‌ನ 66 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆ ನಡೆದಿದೆ. ಸಂಸ್ಥೆಯ ಪ್ರಥಮ ಮಹಿಳಾ
News

Press Briefing Held for FMCI Graduation Days 2026, 856 Graduates to take oath of healthcare

Mangaluru, April 13, 2026: A press briefing for the upcoming FMCI Graduation Days 2026 was held on April 13, 2026,

You cannot copy content of this page