January 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕನ್ನಡ ಭವನದ “ರಜತ ಸಂಭ್ರಮ” ಸಿದ್ಧತಾ ಸಭೆ ಸಂಪನ್ನ

ಜನವರಿ 18ರಂದು ಕಾಸರಗೋಡಿನಲ್ಲಿ ದಿನಪೂರ್ತಿ ಕನ್ನಡೋತ್ಸವ

ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ 25ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಕುರಿತು ನಡೆದ “ರಜತ ಸಂಭ್ರಮ” ಸಿದ್ಧತಾ ಸಭೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಕನ್ನಡ ಭವನದ 25ನೇ ವರ್ಷದ ಸಂಭ್ರಮಾಚರಣೆ ಜನವರಿ 18ರಂದು ಭಾನುವಾರ ಬೆಳಿಗ್ಗೆ 7.30ರಿಂದ ತಡರಾತ್ರಿವರೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗಮಂಟಪದಲ್ಲಿ ವಿವಿಧ ಕನ್ನಡ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂಬಂಧ ಜನವರಿ 5ರಂದು ಸೋಮವಾರ ಸಂಜೆ ಕನ್ನಡ ಭವನದಲ್ಲಿ ನಡೆದ ಸಿದ್ಧತಾ ಸಭೆಯು, ಕನ್ನಡ ಭವನದ ನಿರ್ದೇಶಕರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭವನ ಘಟಕಗಳ ಅಪೇಕ್ಷೆಯಂತೆ ಆಯಾ ಜಿಲ್ಲೆಗಳ ಗಣ್ಯ ಸಾಹಿತಿಗಳು ಹಾಗೂ ಕನ್ನಡ ದುರೀಣರನ್ನು ಕನ್ನಡ ಭವನದ ವಿವಿಧ ಪ್ರಶಸ್ತಿಗಳ ಮೂಲಕ ಗೌರವಿಸಲು ನಿರ್ಣಯಿಸಲಾಯಿತು. ಈ ಮೊದಲು ನಿರ್ಧರಿಸಿದ್ದ 101 ಗೌರವಗಳ ಸಂಖ್ಯೆಯನ್ನು 150ಕ್ಕೆ ವಿಸ್ತರಿಸಲು ತೀರ್ಮಾನಿಸಲಾಯಿತು.

ಕಾರ್ಯಕ್ರಮದ ವಿವರವಾಗಿ ಬೆಳಿಗ್ಗೆ 7.30 ರಿಂದ 9.30ರವರೆಗೆ ವಿಶ್ವಕರ್ಮ ಭಜನಾ ಸಂಘದ 25 ಮಂದಿ ಭಜಕರಿಂದ ಭಜನೆ ನಡೆಯಲಿದೆ. ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆ, ಕನ್ನಡ ಧ್ವಜಾರೋಹಣ, ಶ್ರೀ ಕೃಷ್ಣದೇವರಾಯ ಹಾಗೂ ಕೃಷ್ಣರಾಜ ಒಡೆಯರ್ ಭಾವಚಿತ್ರಗಳಿಗೆ ಹಾರಾರ್ಪಣೆ, ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 10.30ರಿಂದ ವಿವಿಧ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ನಡೆಯಲಿದ್ದು, ಸಮಂತರವಾಗಿ ಪ್ರತ್ಯೇಕ ವೇದಿಕೆಯಲ್ಲಿ ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳು ಜರುಗಲಿವೆ. ಕವಿಗೋಷ್ಠಿ ನಂತರ ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕನ್ನಡ ಭವನದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳಿಗೆ “ರಜತ ಸಂಭ್ರಮ ಗೌರವ ಸನ್ಮಾನ” ನೀಡಲಾಗುವುದು.

ಸಮಾರೋಪದ ನಂತರ ರಂಗಸಿರಿ ವೇದಿಕೆ ಬಾಯಾರುವಿನ ಸತ್ಯನಾರಾಯಣ ಪದಕಣ್ಣಾಯ ಅವರ ನೇತೃತ್ವದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದ್ದು, ಬಳಿಕ ಕರ್ನಾಟಕದಿಂದ ಆಗಮಿಸುವ ಕಲಾವಿದರಿಂದ ವಿಶೇಷ ಕಲಾ ಪ್ರದರ್ಶನಗಳು ನಡೆಯಲಿವೆ.

 

ಸಭೆಯಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ಆಹಾರ ಸಮಿತಿಗೆ ಡಾ. ವೆಂಕಟ್ರಮಣ ಹೊಳ್ಳ, ರವಿ ಕೇಳುಗುಡ್ಡೆ, ನವೀನ್ ನಾಯ್ಕ್, ಅರಿಬೈಲ್ ಗೋಪಾಲ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪರಿಕರ ಸಮಿತಿಗೆ ವಸಂತ ಕೆರೆಮನೆ, ಪ್ರದೀಪ್ ಬೇಕಲ್, ವಿರಾಜ್ ಅಡೂರ್ ನೇಮಕಗೊಂಡರು. ಧ್ವನಿ–ಬೆಳಕು, ವೇದಿಕೆ ಹಾಗೂ ವಾಹನ ನಿಲುಗಡೆ ಸಮಿತಿಗೆ ಮುರಳಿ ಪಾರೆಕಟ್ಟೆ, ಪ್ರದೀಪ್ ನಾಯ್ಕ್ ನಾಗರಕಟ್ಟೆ, ರಾಜೇಶ್ ಕೋಟೆಕಣಿ ಆಯ್ಕೆಯಾದರು.

ಸ್ವಾಗತ ಹಾಗೂ ಅತಿಥಿ ಸತ್ಕಾರ ಸಮಿತಿಗೆ ಪ್ರಿನ್ಸಿಪಾಲ್ ರಾಜೇಶ್ ಚಂದ್ರ ಕೆ.ಪಿ., ಉಮೇಶ್ ರಾವ್ ಕುಂಬಳೆ, ರೇಖಾ ಸುದೇಶ್ ರಾವ್, ಉಷಾಕಿರಣ್ ಹಾಗೂ ಪ್ರಕಾಶ್ ಚಂದ್ರ ಕೆ.ಪಿ. ಅವರನ್ನು ನೇಮಕ ಮಾಡಲಾಯಿತು. ವಸತಿ ಹಾಗೂ ವಾಹನ ಸೌಕರ್ಯ ಸಮಿತಿಗೆ ನವೀನ್ ಚಂದ್ರ ಅನಂಗೂರ್, ಮೋಹನ್ ದಾಸ್ ಕೊರಕೋಡ್, ಉದಯ ನಾಗರಕಟ್ಟೆ, ಕೇಶವ ನಾಗರಕಟ್ಟೆ ಆಯ್ಕೆಯಾದರು. ಆರ್ಥಿಕ ಸಮಿತಿಯ ಸಂಚಾಲಕರಾಗಿ ಡಾ. ವಾಮನ್ ರಾವ್ ಬೇಕಲ್ ಹಾಗೂ ಶಿಕ್ಷಕಿ ಸಂದ್ಯಾ ರಾಣಿ ಅವರನ್ನು ನೇಮಿಸಲಾಯಿತು.

ರಜತ ಸಂಭ್ರಮದ ಅಂಗವಾಗಿ ಕಳೆದ 25 ವರ್ಷಗಳ ಚಟುವಟಿಕೆಗಳನ್ನು ಒಳಗೊಂಡ “ಸ್ಮರಣ ಸಂಚಿಕೆ” ಹೊರತರಲು ತೀರ್ಮಾನಿಸಲಾಗಿದ್ದು, ಅದರ ಜವಾಬ್ದಾರಿಯನ್ನು ವಿರಾಜ್ ಅಡೂರ್ ಹಾಗೂ ಪ್ರದೀಪ್ ಬೇಕಲ್ ಅವರಿಗೆ ವಹಿಸಲಾಯಿತು. ಸಭೆಯಲ್ಲಿ ಶಿಕ್ಷಕಿ ಸಂದ್ಯಾ ರಾಣಿ ಸ್ವಾಗತಿಸಿ, ವಸಂತ ಕೆರೆಮನೆ ವಂದಿಸಿದರು. ಕಾರ್ಯಕ್ರಮವನ್ನು ಪ್ರದೀಪ್ ಬೇಕಲ್ ನಿರ್ವಹಿಸಿದರು.

You may also like

News

ಸಂದೇಶ ಪ್ರಶಸ್ತಿಗಳು 2026 ಘೋಷಣೆ – ಜನವರಿ 21ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರಿನ ಪ್ರತಿಷ್ಠಿತ ಸಂಗೀತಗಾರ ಸೈಮನ್ ಪಾಯ್ಸ್ ಬಜಾಲ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿಗಳು ಮೌಲ್ಯಾಧಾರಿತ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು
News

ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಯಶಸ್ವಿ

ಜನವರಿ 8ರಂದು ಗುರುವಾರ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಿಸೋರಿಯರ್ ಮತ್ತು ಬೆಂಗಳೂರು ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

You cannot copy content of this page