ಬಲ್ಮಠ ದಿ ಮಿಶನ್ ಸ್ಕೂಲ್ಗೆ ಮಕ್ಕಳನ್ನು ದಾಖಲಿಸದಂತೆ ಸಾರ್ವಜನಿಕರಿಗೆ DDPI ಅವರ ಕಟ್ಟುನಿಟ್ಟಿನ ಎಚ್ಚರಿಕೆ!
ಇಲಾಖಾ ಅನುಮತಿಯಿಲ್ಲದೆ ಅಕ್ರಮವಾಗಿ ತರಗತಿ ನಿರ್ವಹಣೆ

ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ತನ್ನ ಚಾಟಿ ಬೀಸಿದೆ. ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಬಲ್ಮಠದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ‘ದಿ ಮಿಶನ್ ಸ್ಕೂಲ್’ ಯಾವುದೇ ಅಧಿಕೃತ ಇಲಾಖಾ ಅನುಮತಿ ಅಥವಾ ಮಾನ್ಯತೆ ಪಡೆಯದೆ ವಿವಿಧ ತರಗತಿಗಳನ್ನು ಸಂಪೂರ್ಣ ಅನಧಿಕೃತವಾಗಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪೋಷಕರು ಹಾಗೂ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದ್ದು, ಈ ಶಾಲೆಗೆ ಯಾವುದೇ ಕಾರಣಕ್ಕೂ ಮಕ್ಕಳನ್ನು ದಾಖಲಿಸದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.

ಪೋಷಕರೇ ಎಚ್ಚರ!
ಯಾವುದೇ ಮಾನ್ಯತೆ ಇಲ್ಲದ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಸೇರಿಸುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಭವಿಷ್ಯಕ್ಕೆ ದೊಡ್ಡ ಪ್ರಮಾಣದ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಪೋಷಕರು ಯಾವುದೇ ಆಕರ್ಷಕ ಜಾಹೀರಾತುಗಳಿಗೆ ಮರುಳಾಗದೆ, ಮುಂಜಾಗರೂಕತೆಯಿಂದ ವರ್ತಿಸುವಂತೆ ಇಲಾಖೆ ಮನವಿ ಮಾಡಿದೆ.

ಅನುಮತಿ ರಹಿತವಾಗಿ ನಡೆಯುತ್ತಿರುವ ಇಂತಹ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನುರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



