June 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಿಜಿಟಲ್ ಪಾವತಿಗೆ ಅಡ್ಡಿ ಏಕೆ? ನಗದು ವ್ಯವಹಾರಕ್ಕೆ ಪ್ರಚೋದನೆ ಆತಂಕಕಾರಿ

ನಗದು ರೂಪದಲ್ಲೇ ದೇಣಿಗೆ ನೀಡಲು ಒತ್ತಾಯ

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬ್ಯಾಂಕ್ ಸಂಬಂಧಿತ ವ್ಯವಹಾರಗಳಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ಸುಲಭತೆಗಾಗಿ ಡಿಜಿಟಲ್ ಪಾವತಿ ವಿಧಾನಗಳನ್ನು ಅನುಸರಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಯುಪಿಐ, ಕ್ಯೂಆರ್ ಕೋಡ್, ಚೆಕ್ ಹಾಗೂ ನೇರ ಬ್ಯಾಂಕ್ ಖಾತೆ ವರ್ಗಾವಣೆಗಳ ಮೂಲಕ ವ್ಯವಹಾರ ನಡೆಸುವಂತೆ ಸರ್ಕಾರ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ.

ಆದರೆ ಇದಕ್ಕೆ ವಿರುದ್ಧವಾಗಿ, ಮಂಗಳೂರಿನ ಕೆಲವು ಸಂಘ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಗದು ವ್ಯವಹಾರಕ್ಕೆ ಪ್ರಚೋದನೆ ನೀಡುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ಚರ್ಚ್‌, ಮಸೀದಿ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾಧಿಗಳು ಕ್ಯೂಆರ್ ಕೋಡ್ ಮೂಲಕ ಕಾಣಿಕೆ ಅಥವಾ ದೇಣಿಗೆ ನೀಡಲು ಮುಂದಾದಾಗ, ಅಲ್ಲಿನ ಆಡಳಿತ ವರ್ಗದವರು “ನಗದು ರೂಪದಲ್ಲೇ ನೀಡಿ” ಎಂದು ಹೇಳುತ್ತಿರುವ ಘಟನೆಗಳು ಕೇಳಿಬರುತ್ತಿವೆ.

ಇದು ಕೇವಲ ಸರ್ಕಾರದ ಡಿಜಿಟಲ್ ನೀತಿಗೆ ವಿರುದ್ಧವಷ್ಟೇ ಅಲ್ಲ, ಹಣಕಾಸು ಪಾರದರ್ಶಕತೆಗೂ ಧಕ್ಕೆ ತರುವ ಅಪಾಯಕಾರಿ ಪ್ರವೃತ್ತಿ. ನಗದು ವ್ಯವಹಾರಗಳು ಲೆಕ್ಕಪತ್ರವಿಲ್ಲದ ಹಣದ ಹರಿವು, ತೆರಿಗೆ ತಪ್ಪಿಸಿಕೊಳ್ಳುವ ಸಾಧ್ಯತೆ ಹಾಗೂ ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಡಿಜಿಟಲ್ ಪಾವತಿ ವ್ಯವಸ್ಥೆ ಇಂದು ಜನಸಾಮಾನ್ಯರಿಂದ ಹಿಡಿದು ಹಿರಿಯ ನಾಗರಿಕರ ತನಕ ವ್ಯಾಪಕವಾಗಿ ಬಳಕೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರಗಳು ಮತ್ತು ಸಂಘ ಸಂಸ್ಥೆಗಳು ಡಿಜಿಟಲ್ ವ್ಯವಹಾರಕ್ಕೆ ಮಾದರಿಯಾಗಬೇಕೇ ಹೊರತು, ನಗದು ಬಳಕೆಗೆ ಉತ್ತೇಜನ ನೀಡಬಾರದು. ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನಗದು ವ್ಯವಹಾರಕ್ಕೆ ಒತ್ತಾಯಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಆದ್ದರಿಂದ, ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಕೇಂದ್ರಗಳು ನಗದು ಸ್ವೀಕಾರವನ್ನು ಹಂತ ಹಂತವಾಗಿ ನಿಲ್ಲಿಸಿ, ಕಡ್ಡಾಯವಾಗಿ ಕ್ಯೂಆರ್ ಕೋಡ್, ಚೆಕ್ ಅಥವಾ ನೇರ ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇದು ಕಾಲದ ಅಗತ್ಯವೂ ಹೌದು, ಸರ್ಕಾರದ ನೀತಿಯೂ ಹೌದು.

ಇದರ ಜೊತೆಗೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಗದು ವ್ಯವಹಾರಕ್ಕೆ ಪ್ರಚೋದನೆ ನೀಡುವ ಸಂಸ್ಥೆಗಳ ವಿರುದ್ಧ ಸೂಕ್ತ ಮಾರ್ಗಸೂಚಿ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಡಿಜಿಟಲ್ ಭಾರತದ ಕನಸು ಕೇವಲ ಘೋಷಣೆಯಾಗದೆ, ನೆಲಮಟ್ಟದಲ್ಲಿ ಜಾರಿಯಾಗಬೇಕಾದರೆ ಇಂತಹ ಅಸಂಗತ ಪ್ರವೃತ್ತಿಗಳಿಗೆ ತಕ್ಷಣವೇ ಬ್ರೇಕ್ ಹಾಕಬೇಕಾಗಿದೆ.

ಪಾರದರ್ಶಕತೆ, ನಂಬಿಕೆ ಮತ್ತು ಕಾನೂನು ಪಾಲನೆ—ಇವೇ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಮೌಲ್ಯವಾಗಬೇಕು. ಡಿಜಿಟಲ್ ಪಾವತಿ ನಿರಾಕರಣೆ ಮಾಡುವುದು ಅಭಿವೃದ್ಧಿಗೆ ತಡೆಯಾಗಬಾರದು ಎಂಬುದು ಜನಸಾಮಾನ್ಯರ ಸ್ಪಷ್ಟ ಅಭಿಪ್ರಾಯವಾಗಿದೆ.

You may also like

News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ
News

ಮಂಗಳೂರಿನ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೀಣಾ ಡೇಸಾ ಇನ್ನಿಲ್ಲ

ಮಂಗಳೂರಿನ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಣಿಪುರದ 49 ವರ್ಷ ಪ್ರಾಯದ ವೀಣಾ ಡೇಸಾ ಅವರು ಜೂನ್ 7ರಂದು ಭಾನುವಾರ

You cannot copy content of this page