May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈ–ಅಬುಧಾಬಿ ರಸ್ತೆ ದುರಂತ – ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ಮೃತ್ಯು

ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳದ ಮಲ್ಲಪುರಂ ಮೂಲದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮಕ್ಕಳ ಪೋಷಕರು ಹಾಗೂ ಅವರ ಏಕೈಕ ಸಹೋದರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಕುಟುಂಬವು ಅಬುಧಾಬಿಯಲ್ಲಿ ನಡೆದ ಲಿವಾ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ದುಬೈಗೆ ವಾಪಸ್ ಆಗುತ್ತಿದ್ದ ವೇಳೆ ಜನವರಿ 5ರಂದು ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 14 ವರ್ಷದ ಅಶಾಝ್, 12 ವರ್ಷದ ಅಮರ್, 7 ವರ್ಷದ ಅಜಾಮ್ ಮತ್ತು 5 ವರ್ಷದ ಅಯ್ಯಾಶ್ ಮೃತಪಟ್ಟಿದ್ದಾರೆ. ಇವರಲ್ಲಿ ಅಶಾಝ್, ಅಮರ್, ಅಯ್ಯಾಶ್ ಹಾಗೂ ಮನೆಯ ಕೆಲಸದಾಕೆ 49 ವರ್ಷದ ಬುಶ್ರಾ ಫಯಾಜ್ ಯಾಹು ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ 7 ವರ್ಷದ ಅಜಾಮ್ ಅವರು ಜನವರಿ 6ರಂದು ಸೋಮವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮಕ್ಕಳ ಪೋಷಕರಾದ ಅಬ್ದುಲ್ ಲತೀಫ್ ಹಾಗೂ ರುಕ್ಸಾನಾ ಮತ್ತು ಅವರ 10 ವರ್ಷದ ಪುತ್ರಿ ಇಜ್ಜಾ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಕೆಲಸದಾಕೆ ಬುಶ್ರಾ ಫಯಾಜ್ ಯಾಹು ಅವರ ಮೃತದೇಹವನ್ನು ಸೋಮವಾರ ಸಂಜೆ ಕೇರಳಕ್ಕೆ ಕಳುಹಿಸಲಾಗಿದ್ದು, ಮಂಗಳವಾರ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ.

ಮಕ್ಕಳ ಸಾವಿನ ವಿಷಯವನ್ನು ತಂದೆ ಅಬ್ದುಲ್ ಲತೀಫ್ ಅವರಿಗೆ ಭಾನುವಾರ ತಿಳಿಸಲಾಗಿದ್ದು, ತಾಯಿ ರುಕ್ಸಾನಾಗೆ ಮಂಗಳವಾರ ಮಾಹಿತಿ ನೀಡಲಾಗಿದೆ. ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಪೋಷಕರು ಹಾಗೂ ಸಹೋದರಿಗೆ ಮಕ್ಕಳ ಮೃತದೇಹಗಳನ್ನು ತೋರಿಸಿದ ಬಳಿಕ ದುಬೈನ ಮುಹೈಸ್ನಾದ ಅಲ್ ಕುಸೈಸ್ ಸಮಾಧಿ ಸ್ಥಳದಲ್ಲಿ ಸಂಜೆ 4.30ರ ಸುಮಾರಿಗೆ ನಾಲ್ವರು ಮಕ್ಕಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬದ ಬಂಧುಗಳು, ಸ್ನೇಹಿತರು ಹಾಗೂ ಸಮುದಾಯದವರು ಹಾಜರಿದ್ದರು.

ಅಬ್ದುಲ್ ಲತೀಫ್ ರಸ್ ಅಲ್ ಖೈಮಾದಲ್ಲಿ ಉದ್ಯಮಿಯಾಗಿದ್ದು, ರುಕ್ಸಾನಾ ರಿಯಲ್ ಎಸ್ಟೇಟ್ ಸಲಹೆಗಾರರಾಗಿದ್ದಾರೆ. ಮಕ್ಕಳ ಶಾಲೆ ಪುನರಾರಂಭಕ್ಕೂ ಮುನ್ನ ಕುಟುಂಬವು ದುಬೈಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಯುಎಇ ಹಾಗೂ ಕೇರಳದಲ್ಲಿ ವ್ಯಾಪಕ ಶೋಕವನ್ನುಂಟುಮಾಡಿದೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page