June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೂಡುಬಿದಿರೆಯಲ್ಲಿ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಭವ್ಯ ಚಾಲನೆ

ಸಮಗ್ರ ಸಂಸ್ಕೃತಿಯ ಸಾರ ಆಳ್ವಾಸ್‌ನಲ್ಲಿ – ವಿಧಾನಸಭಾ ಸಭಾಪತಿ ಯು.ಟಿ. ಖಾದರ್

ಮೊದಲ ದಿನವೇ ಚಿನ್ನ ಮುಡಿಗೇರಿಸಿದ ಆಳ್ವಾಸ್ ವಿದ್ಯಾರ್ಥಿನಿ ನಿರ್ಮಲಾ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಯೋಜಿಸಿರುವ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ ಇಂದು ಜನವರಿ 12ರಂದು ಸೋಮವಾರ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ, ತಾಂತ್ರಿಕ ನಿಖರತೆ, ಶಿಸ್ತುಬದ್ಧತೆ ಹಾಗೂ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ವಿಧಾನಸಭಾ ಸಭಾಪತಿ ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಮಾತನಾಡಿ, “ಆಳ್ವಾಸ್‌ನಲ್ಲಿ ನಡೆಯುವ ಈ ಕ್ರೀಡಾಕೂಟ ಜಾಗತಿಕ ಮಟ್ಟದ ಮಾದರಿಯಾಗಿದೆ. ಭಾರತದ ಎಲ್ಲಾ ಕ್ರೀಡಾಕೂಟಗಳಿಗೆ ಇದು ಹೆಗ್ಗುರುತಾಗಿದೆ ಎಂದು ಶ್ಲಾಘಿಸಿದರು. ವಿಶ್ವ ಸಂಸ್ಕೃತಿಗಳ ಸಾರ ಭಾರತದ ಸಂಸ್ಕೃತಿ, ಭಾರತದ ಸಂಸ್ಕೃತಿಯ ಸಾರ ಕರ್ನಾಟಕ, ಕರ್ನಾಟಕದ ಸಂಸ್ಕೃತಿಯ ಸಾರ ದಕ್ಷಿಣ ಕನ್ನಡ, ದಕ್ಷಿಣ ಕನ್ನಡದ ಸಂಸ್ಕೃತಿಯ ಸಾರ ಆಳ್ವಾಸ್‌ನಲ್ಲಿ ವ್ಯಕ್ತವಾಗುತ್ತದೆ” ಎಂದು ಹೇಳಿದರು.

ಕ್ರೀಡಾಕೂಟವು ಸತ್‌ಪ್ರಜೆ ನಿರ್ಮಾಣಕ್ಕೂ ಹಾಗೂ ಬಲಿಷ್ಠ ಭಾರತದ ಭವಿಷ್ಯಕ್ಕೂ ಬುನಾದಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಉದ್ಘಾಟನಾ ಸಂದರ್ಭದಲ್ಲಿ ತ್ರಿವರ್ಣ ಬಲೂನುಗಳನ್ನು ಗಾಳಿಗೆ ಬಿಡಲಾಯಿತು. ಬಳಿಕ ಕ್ರೀಡಾಜ್ಯೋತಿ ಬೆಳಗಿಸಿ, ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹಾಗೂ ಕ್ರೀಡಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಧ್ವಜಾರೋಹಣ ನೆರವೇರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್ ಮಾತನಾಡಿ, ಕ್ರೀಡೆ ಏಕತೆ ಹಾಗೂ ಶಾಂತಿಯ ಸಂಕೇತವಾಗಿದ್ದು, ಕ್ರೀಡಾ ಸ್ಫೂರ್ತಿಯ ಗೆಲುವು ನಮ್ಮದಾಗಬೇಕು ಎಂದು ಹೇಳಿದರು.

ವೀಕ್ಷಕರಾದ ವಿ. ಶಂಕರ್ ಅವರು, ಡಾ. ಎಂ. ಮೋಹನ ಆಳ್ವರ ಸಾಧನೆ ಅಪಾರವಾಗಿದ್ದು, ಇಂತಹ ಬೃಹತ್ ಕ್ರೀಡಾಕೂಟವನ್ನು ಸಂಘಟಿಸಲು ಆಳ್ವಾಸ್‌ಗೆ ಮಾತ್ರ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, “ಅತ್ಯುತ್ತಮ ಆತಿಥ್ಯ, ಸಂಘಟನೆ ಹಾಗೂ ಅಚ್ಚುಕಟ್ಟುತನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾದರಿಯಾಗಿದೆ” ಎಂದು ಅಭಿನಂದಿಸಿದರು.

ಈ ಕ್ರೀಡಾಕೂಟದಲ್ಲಿ ದೇಶದ 304ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ನಾಲ್ಕು ಸಾವಿರಕ್ಕೂ ಹೆಚ್ಚು ಅಥ್ಲೀಟ್‌ಗಳು ಹಾಗೂ ಸುಮಾರು 1000 ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದಾರೆ.

 

ಮನಸೆಳೆದ ಸಾಂಸ್ಕೃತಿಕ ಮೆರವಣಿಗೆ :

ಭಾರತದ ವೈವಿಧ್ಯಮಯ ಕಲಾ–ಸಂಸ್ಕೃತಿಯನ್ನು ಪ್ರತಿಬಿಂಬಿಸಿದ ಅದ್ಧೂರಿ ಮೆರವಣಿಗೆ ಉದ್ಘಾಟನಾ ಸಮಾರಂಭದ ಮುಖ್ಯ ಆಕರ್ಷಣೆಯಾಯಿತು. ಯಕ್ಷಗಾನ, ಡೊಳ್ಳುಕುಣಿತ, ನಗಾರಿ, ಕೊಂಬು ವಾದನ, ಸಾಂಪ್ರದಾಯಿಕ ವೇಷಭೂಷಣಗಳು, ಬ್ಯಾಂಡ್ ಸೆಟ್‌ಗಳು ಹಾಗೂ ಎನ್‌ಸಿಸಿ–ಸ್ಕೌಟ್ಸ್ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಟ್ರೋಫಿಯನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ಬಳಿಕ ಸಿಡಿಮದ್ದಿನ ಪ್ರದರ್ಶನವು ಆಕಾಶದಲ್ಲಿ ಚಿತ್ತಾರ ಮೂಡಿಸಿತು.

ಸ್ಪರ್ಧೆಗಳು ಮತ್ತು ಫಲಿತಾಂಶ :

ಮೊದಲ ದಿನ ಪುರುಷರು ಹಾಗೂ ಮಹಿಳೆಯರ 10,000 ಮೀಟರ್ ಓಟ ಸೇರಿದಂತೆ ವಿವಿಧ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳ ಅರ್ಹತಾ ಸುತ್ತುಗಳು ಹಾಗೂ ಸೆಮಿಫೈನಲ್‌ಗಳು ನಡೆದವು.

10,000 ಮೀ. ಓಟ (ಪುರುಷರು):

  1. ಗೌರವ್ – ಮಹಾತ್ಮ ಜ್ಯೋತಿಬಾ ಫುಲೆ ವಿಶ್ವವಿದ್ಯಾಲಯ (29:19.46)
  2. ಆಕಾಶ್ – ಎಂಡಿಯು ರೋಹ್ತಕ್ (29:19.91)
  3. ಪ್ರಿನ್ಸ್‌ರಾಜ್ ಯಾದವ್ – ಆದಿಕವಿ ಶ್ರೀಮಹರ್ಷಿ ವಿಶ್ವವಿದ್ಯಾಲಯ (29:21.40)

10,000 ಮೀ. ಓಟ (ಮಹಿಳೆಯರು):

  1. ನಿರ್ಮಲಾ – ಮಂಗಳೂರು ವಿಶ್ವವಿದ್ಯಾಲಯ (34:47.20)
  2. ರವಿನಾ ವಿಜಯ್ ಗಾಯಕವಾಡ್ – ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ, ಪುಣೆ (34:48.07)
  3. ಅಂಜಲಿ ದೇವಿ – ಲವ್ಲೀ ಪ್ರೊಫೆಷನಲ್ ವಿಶ್ವವಿದ್ಯಾಲಯ (34:49.54)

ಮಹಿಳೆಯರ ಮೊದಲ ಚಿನ್ನ ಮುಡಿಗೇರಿಸಿದ ಆಳ್ವಾಸ್

ಕ್ರೀಡಾಕೂಟದ ಮೊದಲ ದಿನ ನಡೆದ ಮಹಿಳೆಯರ 10,000 ಮೀಟರ್ ಓಟದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ನಿರ್ಮಲಾ ಚಿನ್ನದ ಪದಕ ಗೆದ್ದು ಆಳ್ವಾಸ್‌ಗೆ ಮೊದಲ ಗೌರವ ತಂದುಕೊಟ್ಟರು. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ನಿರ್ಮಲಾ ಅವರ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಯಿತು.

You may also like

News

ಕೋಳಿ ಅಂಕದ ಜೂಜಾಟದ ಅಡ್ಡೆಗೆ ವಿಟ್ಲ ಪೊಲೀಸರ ದಿಢೀರ್ ದಾಳಿ – ಮೂವರ ಬಂಧನ, ಸೊತ್ತುಗಳ ವಶ

ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ
News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at

You cannot copy content of this page