September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರ ಮುತುವರ್ಜಿಯಿಂದ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಸರ್ಕಾರದ ಸ್ಮಾರ್ಟ್‌ ಬೋರ್ಡ್‌ಗಳ ಕೊಡುಗೆ

ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರ ವಿಶೇಷ ಆಸಕ್ತಿ ಮತ್ತು ಸತತ ಪ್ರಯತ್ನದ ಫಲವಾಗಿ, ಇಸ್ರೇಲ್‌ ಸರ್ಕಾರದ ‘ಮಾಶಾವ್’ (MASHAV) ಕಾರ್ಯಕ್ರಮದಡಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಈ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಹೊಸ ಉತ್ತೇಜನ ನೀಡುವ ಜೊತೆಗೆ ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಇಸ್ರೇಲ್‌ ಸಹಕಾರವನ್ನು ಸ್ಥಳೀಯ ಮಟ್ಟಕ್ಕೆ ತರಲಾಗಿದೆ.

ಅನಂತಾಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಇಸ್ರೇಲ್‌ ಕಾನ್ಸುಲ್‌ ಜನರಲ್ ಓರ್ಲಿ ವೈಟ್ಜ್‌ಮನ್ ಅವರು ಸ್ಮಾರ್ಟ್‌ ಬೋರ್ಡ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಸಂಸದರಾದ ಚೌಟ ಅವರು ಅಧಿಕಾರ ಸ್ವೀಕರಿಸಿದ ಆರಂಭಿಕ ದಿನಗಳಿಂದಲೇ ಇಸ್ರೇಲ್‌ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೃಷಿ ಮತ್ತು ಶಿಕ್ಷಣದಲ್ಲಿ ವಿಶ್ವಮಟ್ಟದ ತಂತ್ರಜ್ಞಾನವನ್ನು ಜಿಲ್ಲೆಗೆ ತರಲು ಪ್ರಯತ್ನಿಸಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಓರ್ಲಿ ವೈಟ್ಜ್‌ಮನ್, “ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕೈಜೋಡಿಸಿರುವುದು ಸಂತಸದ ವಿಷಯ. ಈ ಸ್ಮಾರ್ಟ್‌ ಬೋರ್ಡ್‌ಗಳು ಡಿಜಿಟಲ್‌ ಶಿಕ್ಷಣಕ್ಕೆ ಹೊಸ ವೇಗ ನೀಡಲಿದ್ದು, ಮುಂದಿನ ದಿನಗಳಲ್ಲಿ ವ್ಯಾಪಾರ ಮತ್ತು ಸಾಂಸ್ಕೃತಿಕ ಸಹಕಾರವೂ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಮಾತನಾಡಿ, “ಭಾರತ–ಇಸ್ರೇಲ್‌ ನಡುವಿನ ಸ್ನೇಹ ಸಂಬಂಧವು ಕೃಷಿ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಬಲಿಷ್ಠವಾಗಿದೆ. ಸಂಸದನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನಗಳಿಂದಲೇ ಈ ಜಾಗತಿಕ ಸಹಯೋಗವನ್ನು ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವ ಗುರಿ ಹೊಂದಿದ್ದೇನೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಕಲಿಕಾ ಮಟ್ಟ ಜಾಗತಿಕ ಮಟ್ಟಕ್ಕೆ ಏರಲಿದೆ” ಎಂದರು. ಈ ಸಹಕಾರಕ್ಕೆ ಇಸ್ರೇಲ್‌ ರಾಯಭಾರಿ ರೆವೆನ್ ಅಜರ್ ಹಾಗೂ ಕಾನ್ಸುಲ್‌ ಜನರಲ್‌ ಓರ್ಲಿ ವೈಟ್ಜ್‌ಮನ್ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಯೋಜನೆಯಡಿ ಒಟ್ಟು ನಾಲ್ಕು ಶಾಲೆಗಳಿಗೆ ತಲಾ ರೂಪಾಯಿ 3.5 ಲಕ್ಷ ಅನುದಾನದಲ್ಲಿ ಸ್ಮಾರ್ಟ್‌ ಬೋರ್ಡ್‌ಗಳನ್ನು ನೀಡಲಾಗಿದೆ. ಅನಂತಾಡಿ ಬಂಟ್ರಿಂಜದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ, ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಹಾಗೂ ಮಣ್ಣಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಹಿರಿಯ ಪ್ರಾಥಮಿಕ ಶಾಲೆಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಅನಂತಾಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

You may also like

News

National Nutrition Week 2026 Celebrated with a Focus on Healthy Choices and Better Health

“Nourishing Lives Through Healthy Choices” National Nutrition Week 2026 was observed with the theme “Nourishing Lives Through Healthy Choices” through
News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ

You cannot copy content of this page