ಮುಲ್ಕಿ ಮುತ್ತಯ್ಯಕೆರೆ ಡಬಲ್ ಮರ್ಡರ್ ಪ್ರಕರಣ – ಆಲ್ಫೋನ್ಸ್ ಸಲ್ಡಾನ್ಹಾ ಆರೋಪಿಗೆ ಜೀವಾವಧಿ ಶಿಕ್ಷೆ, ₹2 ಲಕ್ಷ ದಂಡ
ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಪ್ರದೇಶದಲ್ಲಿ 29-04-2020ರಂದು ನಡೆದ ಡಬಲ್ ಮರ್ಡರ್ ಕೊಲೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಅವರೊಂದಿಗೆ ವೈಮನಸ್ಸು ಉಂಟಾಗಿದ್ದು, ರಾಜಿ ಪಂಚಾಯತಿ ನಡೆಸುವ ನೆಪದಲ್ಲಿ ಆರೋಪಿ ಆಲ್ಫೋನ್ಸ್ ಸಲ್ಡಾನ್ಹಾನನು ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಅವರನ್ನು ತನ್ನ ಮನೆಗೆ ಕರೆಸಿ ಗಲಾಟೆ ನಡೆಸಿ ಚೂರಿಯಿಂದ ತಿವಿದು ಕೊಲೆ ಮಾಡಿದ್ದನು. ಅಲ್ಲದೇ, ರಕ್ಷಿಸಲು ಧಾವಿಸಿ ಬಂದ ಅವರ ಪತ್ನಿ ಹೆಲೆನ್ ಡಿಸೋಜ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಅಟ್ಟಾಡಿಸಿ ಅಮಾನುಷವಾಗಿ ಚೂರಿಯಿಂದ ತಿವಿದು ಕೊಲೆಗೈದಿದ್ದನು.

ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2020 ಕಲಂ 341, 504, 506 ಹಾಗೂ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಯರಾಮ ಡಿ. ಗೌಡ ಅವರು ಸಂಪೂರ್ಣ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ತನಿಖೆಯಲ್ಲಿ ಎಎಸ್ಐ ಉಮೇಶ್ ಕೆ. ಹಾಗೂ ಹೆಚ್.ಸಿ. 725ನೇ ವಾದಿರಾಜ ಅವರು ಸಹಕಾರ ನೀಡಿದ್ದರು.

ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ಎಸ್.ಸಿ. ನಂ. 69/2020 ರಂತೆ ವಿಚಾರಣೆಗೆ ಒಳಪಟ್ಟಿದ್ದು, ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ವಿಚಾರಣೆ ನಡೆಸಿದ್ದರು. ಬಳಿಕ ಪ್ರಸ್ತುತ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ಇಂದು ಜನವರಿ 19ರಂದು ಸೋಮವಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಾಕ್ಷಿ ವಿಚಾರಣೆ ಸಮಯದಲ್ಲಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಅವರು ಅಭಿಯೋಜನೆ ಪರ ವಾದ ಮಂಡಿಸಿದ್ದು, ಮುಲ್ಕಿ ಪೊಲೀಸ್ ಠಾಣೆಯ ಮಪಿಸಿ 827ನೇ ಕಾವ್ಯ ಅವರು ಸಹಕರಿಸಿದ್ದರು.




