May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಇನೋವಾ ಕಾರು ಖರೀದಿ ನೆಪದಲ್ಲಿ ₹8 ಲಕ್ಷ ವಂಚನೆ – ಹಣ ಕೇಳಿದಾಗ ಕೊಲೆ ಬೆದರಿಕೆ

ಆರೋಪಿಗಳು ಸೌದಿಖತಾರ್ಗೆ ಪರಾರಿ ಆರೋಪ

ಇನೋವಾ ಕಾರು ಖರೀದಿ ಮಾಡುವ ನೆಪದಲ್ಲಿ ₹8 ಲಕ್ಷಕ್ಕೂ ಅಧಿಕ ಮೊತ್ತ ವಂಚನೆ ಮಾಡಿರುವ ಆರೋಪ ಮಂಗಳೂರಿನ ಪಾಂಡೇಶ್ವರ ಮೂಲದ ತಾಯಿ–ಮಗಳ ವಿರುದ್ಧ ಕೇಳಿಬಂದಿದೆ. ವಂಚನೆಗೆ ಒಳಗಾದ ಅಶ್ರಫ್ ಎಂಬವರು (MRPL ಉದ್ಯೋಗಿ) ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪರಿಣಾಮಕಾರಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪೀಡಿತನ ಸ್ನೇಹಿತ ನಾದ ಗಂಗಾಧರ ಅವರು ಹರಿಯಾಣ ರಾಜ್ಯದಿಂದ HR-83-0630 ಸಂಖ್ಯೆಯ ಇನೋವಾ ಕಾರನ್ನು ಖರೀದಿಸಿ ತಂದಿದ್ದರು. ನಂತರ ಕಾರು ಇಷ್ಟವಾಗದ ಹಿನ್ನೆಲೆಯಲ್ಲಿ ಅದನ್ನು ಮಾರಾಟ ಮಾಡಿ ಹಣ ಹಿಂತಿರುಗಿಸುವಂತೆ ಪೀಡಿತರಿಗೆ ಮನವಿ ಮಾಡಿದ್ದರು.

ಈ ನಡುವೆ 2025ರ ಏಪ್ರಿಲ್ 1ರಂದು ಪೀಡಿತರ ನೆರೆಹೊರೆಯ ಶಾಹಿದ್ ಎಂಬವರು ತಮ್ಮ ಪರಿಚಯದ ಗ್ರಾಹಕರಿದ್ದಾರೆ ಎಂದು ಹೇಳಿ, ಬೀ. ಫಾತಿಮ (ಪತಿ: ಅಬ್ದುಲ್ ಮಜಿದ್) ಹಾಗೂ ಅವರ ಮಗಳು ರೆಹಮತ್ (ಪತಿ: ಅಬ್ದುಲ್ ರೆಹಮಾನ್ ಅಶ್ಫಾಕ್) ಅವರನ್ನು ಪರಿಚಯಿಸಿದ್ದಾರೆ. ಆರೋಪಿಗಳು ಇನೋವಾ ಕಾರನ್ನು ₹8,60,000ಕ್ಕೆ ಖರೀದಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಮಂಗಳೂರು RTOಯಲ್ಲಿ ತೆರಿಗೆ ಪಾವತಿಗೆ ಒಟ್ಟು ₹1,80,000 ಅಗತ್ಯವಿದ್ದು, ಅದರಲ್ಲಿ ₹60,000 ಮಾತ್ರ ತಮ್ಮ ಬಳಿ ಇದೆ. ಉಳಿದ ₹8 ಲಕ್ಷವನ್ನು ಶ್ರೀರಾಮ್ ಫೈನಾನ್ಸ್‌ನಿಂದ ಸಾಲವಾಗಿ ಪಡೆದು ಕೊಡುತ್ತೇವೆ ಎಂದು ಆರೋಪಿಗಳು ಭರವಸೆ ನೀಡಿದ್ದಾರೆ. ಸಮುದಾಯದ ಮಹಿಳೆಯರು ಎಂಬ ನಂಬಿಕೆಯಿಂದ ಪೀಡಿತರು ಕಾರು ವರ್ಗಾವಣೆಗೆ ಒಪ್ಪಿಕೊಂಡಿದ್ದಾರೆ ಎಂದು ದೂರಲಾಗಿದೆ.

ಹರಿಯಾಣ RTOಯಿಂದ ಕಾರನ್ನು ಎರಡನೇ ಆರೋಪಿ ರೆಹಮತ್ ಹೆಸರಿಗೆ ನೋಂದಾಯಿಸಿ, ನಂತರ KA-19-MQ-7027 ಸಂಖ್ಯೆಗೆ ಮರುನೋಂದಣಿ ಮಾಡಲಾಗಿದೆ. ಆದರೆ ಆರೋಪಿಗಳು ಶ್ರೀರಾಮ್ ಫೈನಾನ್ಸ್‌ನಿಂದ ₹8 ಲಕ್ಷ ಸಾಲ ಪಡೆದುಕೊಂಡರೂ ಆ ಹಣವನ್ನು ಪೀಡಿತರಿಗೆ ನೀಡದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಣ ಕೇಳಿದಾಗ ಸಾಲ ಸಿಗಲಿಲ್ಲ ಎಂದು ಸುಳ್ಳು ಹೇಳಿ ಕಾಲಹರಣ ಮಾಡಲಾಗಿದ್ದು, ನಂತರ ಸಾಲ ಪಡೆದಿರುವುದು ತಿಳಿದ ಬಳಿಕ ಮತ್ತೆ ಹಣ ಕೇಳಿದಾಗ ಮೊದಲ ಆರೋಪಿ ಬೀ. ಫಾತಿಮ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ರೌಡಿಗಳ ಮೂಲಕ ಹಲ್ಲೆ ಮಾಡಿಸುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಎರಡನೇ ಆರೋಪಿ ರೆಹಮತ್ ಕೂಡ ಮನೆಗೆ ಬಂದರೆ ಕೈಕಾಲು ಮುರಿಸುವುದಾಗಿ ಬೆದರಿಕೆ ನೀಡಿದ್ದಾರೆ ಎಂದು ದೂರಲಾಗಿದೆ.

ಈ ಕುರಿತು ಪೀಡಿತರು 2025ರ ಜುಲೈ 15ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 4ರಂದು ಹಿಂಬರವಣಿಗೆ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಆಗಸ್ಟ್ 12 ಮತ್ತು 16ರಂದು ಠಾಣಾಧಿಕಾರಿ ಅವರಿಗೆ ಮರುದೂರು ಹಾಗೂ ನೋಂದಾಯಿತ ಅಂಚೆಯ ಮೂಲಕ ಮನವಿ ಸಲ್ಲಿಸಿದರೂ ಪ್ರಕರಣದಲ್ಲಿ ಪ್ರಗತಿ ಇಲ್ಲವೆಂದು ಆರೋಪಿಸಿದ್ದಾರೆ.

ಈ ನಡುವೆ ಆರೋಪಿಗಳು ಸೌದಿ ಅರೇಬಿಯಾ ಹಾಗೂ ಖತಾರ್‌ಗೆ ತೆರಳಿ ಮರುಮರು ವಾಪಸ್ಸಾಗುತ್ತಿದ್ದಾರೆ ಎಂದು ಪೀಡಿತರು ಆರೋಪಿಸಿದ್ದಾರೆ. ₹8 ಲಕ್ಷ ವಂಚನೆಗೆ ಒಳಗಾದರೂ ನ್ಯಾಯ ಸಿಗದೆ ಇದೀಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ಈ ಗಂಭೀರ ವಂಚನೆ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕ ಒತ್ತಾಯ ಹೆಚ್ಚಾಗುತ್ತಿದೆ.

You may also like

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು
News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC

You cannot copy content of this page