September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಐಟಿ ದಾಳಿ ವೇಳೆ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡ ಉದ್ಯಮಿ ಸಿಜೆ ರಾಯ್‌ – ಬೆಂಗಳೂರನ್ನು ಬೆಚ್ಚಿಬೀಳಿಸಿದ ದುರಂತ

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯದ ಒಡೆಯ ಇನ್ನಿಲ್ಲ

ಕೋಟ್ಯಂತರ ರೂಪಾಯಿ ಆಸ್ತಿ, ಐಷಾರಾಮಿ ಜೀವನ, ದೇಶ–ವಿದೇಶಗಳಲ್ಲಿ ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿಜೆ ರಾಯ್‌ ದುರಂತ ಅಂತ್ಯ ಕಂಡಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ನಡೆದ ಐಟಿ ದಾಳಿಯ ಸಂದರ್ಭದಲ್ಲೇ ಅವರು ತಮಗೆ ತಾವೇ ಗುಂಡು ಹಾರಿಸಿಕೊಂಡ ಘಟನೆ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ.

ಲಭ್ಯವಾದ ಮಾಹಿತಿಯಂತೆ, ಐಟಿ ಅಧಿಕಾರಿಗಳಿಗೆ ದಾಖಲೆ ತರುತ್ತೇನೆ ಎಂದು ಕಚೇರಿಯೊಳಗೆ ತೆರಳಿದ್ದ ಸಿಜೆ ರಾಯ್, ಅಚಾನಕ್ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಸಿಬ್ಬಂದಿ ಹಾಗೂ ಐಟಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ. ಕೇರಳದಲ್ಲಿ ಜನಿಸಿದ ಸಿಜೆ ರಾಯ್‌ ಬೆಂಗಳೂರಿನಲ್ಲಿ ಬೆಳೆದು, ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. 2006ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಜಿರೋ ಡೆಬ್ಟ್ ಮಾದರಿಯ ಮೂಲಕ ಗಮನ ಸೆಳೆದಿದ್ದರು. ಕೇರಳ, ಕರ್ನಾಟಕ ಹಾಗೂ ದುಬೈ ಸೇರಿ 165ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯ ನಿರ್ಮಿಸಿದ್ದರು.

ಐಷಾರಾಮಿ ಕಾರುಗಳ ಅಪರೂಪದ ಸಂಗ್ರಹಕ್ಕೂ ಅವರು ಹೆಸರುವಾಸಿಯಾಗಿದ್ದು, 12 ರೋಲ್ಸ್ ರಾಯ್ಸ್ ಸೇರಿದಂತೆ ಅನೇಕ ಹೈಪರ್ ಕಾರುಗಳು ಅವರ ಬಳಿ ಇದ್ದವು. ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ಪ್ರಾಯೋಜನ, ವಿದ್ಯಾರ್ಥಿವೇತನ ಮತ್ತು ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಸೇರಿದಂತೆ ಸಮಾಜ ಸೇವೆಯಲ್ಲೂ ಅವರು ತೊಡಗಿಸಿಕೊಂಡಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಪನಿಗೆ ಸಂಬಂಧಿಸಿದಂತೆ ಐಟಿ ದಾಳಿ ಹಾಗೂ ವಿವಾದಗಳು ಎದುರಾಗಿದ್ದು, ಅದೇ ಒತ್ತಡ ಈ ದುರಂತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಸಿಜೆ ರಾಯ್ ಅವರ ಅಕಾಲಿಕ ಮರಣ, ಯಶಸ್ಸು ಮತ್ತು ವೈಭವದ ನಡುವೆಯೂ ಮಾನಸಿಕ ಒತ್ತಡ ಎಷ್ಟು ಭಾರಿಯಾಗಿರಬಹುದು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.

ಮೃತರಿಗೆ ಪತ್ನಿ ಲಿನಿ ರಾಯ್ ಹಾಗೂ ಇಬ್ಬರು ಮಕ್ಕಳು ಇದ್ದು, ಕುಟುಂಬದಲ್ಲಿ ಆಳವಾದ ದುಃಖ ಮನೆಮಾಡಿದೆ.

You may also like

News

Father Muller Celebrates National Nutrition Week 2026

Nourishing Lives Through Healthy Choices National Nutrition Week 2026 was observed with the theme “Nourishing Lives Through Healthy Choices” through
News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ

You cannot copy content of this page