ಮಹಿಳೆ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣ – ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
ಜಾಗದ ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ್ ವೈ.ಎಚ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ.

2022ರ ಡಿಸೆಂಬರ್ 27ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವಾಗಿ ಉಂಟಾದ ತಕರಾರಿನ ಸಂದರ್ಭದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಆರೋಪದಡಿ ಅರುಣ್ ಕುಮಾರ್, ವಿನಯ ಕುಮಾರ್ ಜಿ. ಮತ್ತು ಸುಂದರ ಪಿ.ಎಂ. ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 113/2022ರಂತೆ ಐಪಿಸಿ ಕಲಂ 447, 504, 506, 323, 354 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಪೊಲೀಸ್ ಸಿಬ್ಬಂದಿ ಸುಬ್ರಮಣ್ಯ ಹೆಚ್. ಅವರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಶಿಕ್ಷೆಯ ವಿವರ:
- ಐಪಿಸಿ ಕಲಂ 323: ಮೊದಲ ಆರೋಪಿ ಅರುಣ್ ಕುಮಾರ್ಗೆ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
- ಐಪಿಸಿ ಕಲಂ 354: ಮೊದಲ ಆರೋಪಿ ಅರುಣ್ ಕುಮಾರ್ಗೆ ಎರಡು ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
- ಐಪಿಸಿ ಕಲಂ 506: ಮೂವರು ಆರೋಪಿಗಳಿಗೂ ತಲಾ ಒಂದು ವರ್ಷದ ಸರಳ ಕಾರಾಗೃಹ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿಯಾಗಿ ತಲಾ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.



