ಪುತ್ತೂರು ರಸ್ತೆ ಅಪಘಾತದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮಮತಾ ದುರ್ಮರಣ
ಪುತ್ತೂರು ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಮಮತಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಮತಾ ಅವರು ಅಂಚೆ ಇಲಾಖೆಯ ಕರ್ತವ್ಯ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಮುಕ್ರಂಪಾಡಿಯಲ್ಲಿ ಆಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಮಮತಾ ಅವರು ಪುತ್ತೂರು KSRTCಯಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೀತಾರಾಮ ಅವರ ಪತ್ನಿಯಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



