July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಗಳ ಸನಿಹ ತಂದ ‘ಪೋಪೆರ್ ಬರ್ಪೆರ್’

ಬಜ್ಪೆಯಲ್ಲಿ ಪೋಪ್ ಜೋನ್ ಪಾವ್ಲ್ II ಭೇಟಿ ಮಾಡಿದ 40 ವರ್ಷಗಳ ಸ್ಮರಣೆ

ಇದು ಕೇವಲ ಒಬ್ಬ ಧಾರ್ಮಿಕ ಮುಖಂಡರ ಜೀವನಚರಿತ್ರೆಯಲ್ಲ. ಇದು ಧರ್ಮಧರ್ಮಗಳ ಸಾಮರಸ್ಯಕ್ಕಾಗಿ ಮಿಡಿದ ಒಂದು ಮಹಾನ್ ಹೃದಯದ ಕಥೆ; ಮಾನವೀಯತೆ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಜಗತ್ತಿಗೆ ನೀಡಿದ ಜಗದ್ಗುರುವೊಬ್ಬರ ಸ್ಮರಣೆಯ ಪುಟ.

ನಿಖರವಾಗಿ 40 ವರ್ಷಗಳ ಹಿಂದೆ, 1986ರ ಫೆಬ್ರವರಿ 6ರಂದು, ರೋಮನ್ ಕ್ಯಾಥೊಲಿಕ್ ಚರ್ಚ್ ನ ಪರಮಗುರು, ಜಗದ್ಗುರು ಪೋಪ್ ಜೋನ್ ಪಾವ್ಲ್ II ಅವರ ಪಾದಸ್ಪರ್ಶದಿಂದ ಪಾವನಗೊಂಡ ಪುಟ್ಟ ಊರು ನಮ್ಮ ಹೆಮ್ಮೆಯ ಬಜ್ಪೆ. ಆ ದಿನ ಇಂದಿಗೂ ಬಜ್ಪೆಯ ನಾಗರಿಕರ ಮನಸ್ಸಿನಲ್ಲಿ ಮರೆಯಲಾಗದ ಚರಿತ್ರೆಯ ದಿನವಾಗಿ ಉಳಿದಿದೆ.

2026 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕ್ಯಾಥೊಲಿಕ್ ಚರ್ಚ್ ನಲ್ಲಿ ಇದುವರೆಗೆ 267 ಪೋಪ್‌ಗಳು ಆಗಿಹೋದರೂ, ಭಾರತಕ್ಕೆ ಭೇಟಿ ನೀಡಿದ ಪೋಪ್‌ಗಳು ಕೇವಲ ಇಬ್ಬರು ಮಾತ್ರ. 1964ರಲ್ಲಿ ಪೋಪ್ ಪಾವ್ಲ್ VI ಮುಂಬೈಗೆ ಭೇಟಿ ನೀಡಿದ್ದರು. ಬಳಿಕ 1986 ಮತ್ತು 1999ರಲ್ಲಿ ಪೋಪ್ ಜಾನ್ ಪಾವ್ಲ್ II ಭಾರತಕ್ಕೆ ಆಗಮಿಸಿದ್ದರು. ಆದರೆ 1986ರ ಮೊದಲ ಭೇಟಿಯೇ ಇತಿಹಾಸ ನಿರ್ಮಿಸಿತು. ಆ ಸಂದರ್ಭದಲ್ಲಿ ಪೋಪ್ ಅವರು ಭಾರತದ ಒಂಬತ್ತು ರಾಜ್ಯಗಳ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಎಲ್ಲೆಡೆ ಧರ್ಮಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ಸಾರಿದರು. ಕ್ರೈಸ್ತರು ಮಾತ್ರವಲ್ಲದೆ ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯಗಳ ಧಾರ್ಮಿಕ ನಾಯಕರು, ರಾಜಕಾರಣಿಗಳು ಮತ್ತು ಲಕ್ಷಾಂತರ ಸಾಮಾನ್ಯ ಜನರು ಅವರನ್ನು ಕಾಣಲು ಸೇರಿದ್ದರು.

ಮೂಲತಃ ಪೋಪ್ ಅವರ ಕಾರ್ಯಕ್ರಮ ಬೆಂಗಳೂರು ನಗರದಲ್ಲಿ ನಿಗದಿಯಾಗಿದ್ದರೂ, ಆ ಸಮಯದಲ್ಲಿ ಉಂಟಾಗಿದ್ದ ಭಾಷಾ ಸಂಘರ್ಷದ ಹಿನ್ನೆಲೆದಿಂದಾಗಿ, ಕಾರ್ಯಕ್ರಮವನ್ನು ‘ಪೂರ್ವದ ರೋಮ್’ ಎಂದು ಕರೆಯಲ್ಪಡುವ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರಿಸಲಾಯಿತು. ಈ ಮೂಲಕ ಪೋಪ್ ಅವರನ್ನು ಸ್ವಾಗತಿಸುವ ಅಪೂರ್ವ ಭಾಗ್ಯ ಬಜ್ಪೆಗೆ ಲಭಿಸಿತು. ಆ ಕಾಲದಲ್ಲಿ ಇಂದಿನಂತೆ ಸಾರಿಗೆ ಸೌಲಭ್ಯಗಳು ಇಲ್ಲದಿದ್ದರೂ, ಬಜ್ಪೆಯ ಕ್ರೈಸ್ತ ಕುಟುಂಬಗಳು ಮಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಲಕ್ಷಾಂತರ ಭಕ್ತರಿಗೆ ತಮ್ಮ ಮನೆಗಳ ಬಾಗಿಲು ತೆರೆದು ಆತಿಥ್ಯ ನೀಡಿದವು. ಊರಿನ ಪ್ರತಿಯೊಂದು ಮನೆ ಕೂಡ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಇಂದಿಗೂ ನೆನಪಾಗುತ್ತದೆ.

ಪೋಪ್ ಆಗಮನಕ್ಕಾಗಿ ಸುಮಾರು 10 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ವೇದಿಕೆಯಾಗಿ ಪರಿವರ್ತಿಸಲಾಗಿತ್ತು. 12 ಅಡಿ ಎತ್ತರದ ಶಿಲುಬಾಕಾರದ ವೇದಿಕೆ, ಉಡುಪಿ ಮಲ್ಲಿಗೆ ಮತ್ತು ಮಂಗಳೂರು ಸೇವಂತಿಗೆ ಹೂವಿನ ಅಲಂಕಾರ, ಬಿಳಿ-ಹಳದಿ ಬಣ್ಣದ ಪೆಂಡಲ್, ಕೆಂಪು ಕಾರ್ಪೆಟ್‌ಗಳು – ಎಲ್ಲವೂ ಆ ದಿನದ ವೈಭವವನ್ನು ಹೆಚ್ಚಿಸಿತ್ತು. 1986ರ ಫೆಬ್ರವರಿ 6ರಂದು ಮಧ್ಯಾಹ್ನ 3 ಗಂಟೆಗೆ, ಪೋಪ್ ಜೋನ್ ಪಾವ್ಲ್ II ತೆರೆದ ಜೀಪಿನಲ್ಲಿ ವೇದಿಕೆಗೆ ಆಗಮಿಸಿದರು. ತುತ್ತೂರಿ, ಡ್ರಮ್, ವಾದ್ಯಗಳ ನಾದಗಳ ನಡುವೆ ಲಕ್ಷಾಂತರ ಜನರ ಹರ್ಷೋದ್ಗಾರ ಕೇಳಿಬಂತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೋಪ್ ಅವರು ಮೊದಲು ಕನ್ನಡದಲ್ಲಿ ಪ್ರಾರ್ಥನಾ ವಾಕ್ಯವನ್ನು ಉಚ್ಚರಿಸಿ ಜನರ ಮನಗೆದ್ದರು.

ಕೊಂಕಣಿ, ಇಂಗ್ಲಿಷ್ ಭಾಷೆಗಳಲ್ಲಿ ಆಶೀರ್ವಚನ ನೀಡಿ, ಯೇಸುಕ್ರಿಸ್ತರ ಸೇವೆ, ಮಾನವೀಯತೆ, ಶಾಂತಿ ಮತ್ತು ಭಾರತದ ಪ್ರಗತಿಯನ್ನು ಸ್ಮರಿಸಿದರು. ಸುಮಾರು 5 ಲಕ್ಷ ಜನರು ಭಾಗವಹಿಸಿದ್ದ ಈ ಮಹಾಸಭೆ, ಅಂದಿನ ಕರ್ನಾಟಕದ ಇತಿಹಾಸದಲ್ಲೇ ಅಪರೂಪದ ದಾಖಲೆ ಎನಿಸಿತು. ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಧರ್ಮಕ್ಷೇತ್ರ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಕಾರ, ಬಿಗಿಭದ್ರತಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಸ್ವಯಂಸೇವಕರ ಶ್ರಮ ಪ್ರಮುಖ ಕಾರಣವಾಗಿತ್ತು. ಯಾವುದೇ ಅವಘಡವಿಲ್ಲದೆ ಲಕ್ಷಾಂತರ ಜನರನ್ನು ನಿಭಾಯಿಸಿದುದು ಅದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿತ್ತು.

 

ಪೋಪ್ ಜೋನ್ ಪಾವ್ಲ್ II ಕೇವಲ ಧಾರ್ಮಿಕ ನಾಯಕನಷ್ಟೇ ಅಲ್ಲ, ಮಾನವತೆಯ ಪ್ರತೀಕ, ಶಾಂತಿಯ ದೂತ. 1920ರಲ್ಲಿ ಪೋಲೆಂಡ್‌ನ ಬಡ ಕುಟುಂಬದಲ್ಲಿ ಜನಿಸಿದ ಅವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು. ಆದರೆ ಅದೇ ಅನುಭವಗಳು ಅವರನ್ನು ಶೋಷಿತರ ಪರ ಧ್ವನಿ ಎತ್ತುವ ಮಹಾನ್ ಮಾನವತಾವಾದಿಯಾಗಿ ರೂಪಿಸಿತು. 129 ದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಭಾಷೆಗಳಲ್ಲಿ ಮಾತನಾಡಿ ಜನರ ಹೃದಯ ಗೆದ್ದ ಅವರು, ವಿಶ್ವಮಾನವತೆಯ ಪ್ರತಿರೂಪವಾಗಿ ಗುರುತಿಸಿಕೊಂಡರು. 1981ರಲ್ಲಿ ನಡೆದ ಗುಂಡಿನ ದಾಳಿಯ ಬಳಿಕವೂ ತಮ್ಮ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಕ್ಷಮಿಸಿದ ಅವರ ಮನಸ್ಸಿನ ಮಹತ್ತ್ವ ಜಗತ್ತಿಗೆ ಮಾದರಿಯಾಯಿತು.

2005ರಲ್ಲಿ ಪೋಪ್ ಜೋನ್ ಪಾವ್ಲ್ II ದೇಹಾಂತ್ಯ ಹೊಂದಿದರು. ಆದರೆ ಅವರ ಮಾನವೀಯ ಸೇವೆ, ಶಾಂತಿಯ ಸಂದೇಶ ಮತ್ತು ಧರ್ಮಸೌಹಾರ್ದತೆಯ ಚಿಂತನೆ ಇಂದಿಗೂ ಜೀವಂತವಾಗಿದೆ. 2014ರ ಏಪ್ರಿಲ್ 27ರಂದು ಅವರನ್ನು ಸಂತ (Saint) ಎಂದು ಘೋಷಿಸಲಾಯಿತು. ಪೋಪ್ ಬಜ್ಪೆಗೆ ಭೇಟಿ ನೀಡಿದ ನೆನಪಿಗಾಗಿ, ಅದೇ ಸ್ಥಳದಲ್ಲಿ ದೇಗುಲ ನಿರ್ಮಿಸಲಾಗಿದ್ದು, 2016ರಲ್ಲಿ ಸಾರ್ವಜನಿಕರಿಗೆ ಮುಕ್ತಗೊಂಡಿದೆ. ಹಿಂದೂ ಬಾಂಧವರೂ ಸಹ ಧರ್ಮಾರ್ಥವಾಗಿ ಭೂಮಿ ನೀಡಿದ ಈ ಘಟನೆ, ಪೋಪ್ ಸಾರಿದ ಧರ್ಮಸೌಹಾರ್ದತೆಯ ಜೀವಂತ ಉದಾಹರಣೆಯಾಗಿದೆ.

ಫೆಬ್ರವರಿ 6, 2026ರಂದು, ಪೋಪ್ ಜಾನ್ ಪಾವ್ಲ್ II ಅವರ ಬಜ್ಪೆ ಭೇಟಿ ಮಾಡಿದ 40ನೇ ವರ್ಷದ ಸ್ಮರಣೆಯನ್ನು ಬಜ್ಪೆಯ ದೇಗುಲದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಹಿಂದೂ–ಮುಸ್ಲಿಂ ಬಾಂಧವರಿಂದಲೂ ಹೊರೆಕಾಣಿಕೆಗಳು ಬಂದಿದ್ದು, ಪೋಪ್ ಅವರ ಸಂದೇಶ ಇಂದಿಗೂ ಜೀವಂತವಿದೆ ಎಂಬುದನ್ನು ತೋರಿಸಿದೆ.

ಧರ್ಮಗಳನ್ನು ಮೀರಿದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಈ ಸಂದೇಶ, ಇಂದಿನ ದ್ವೇಷಭರಿತ ಕಾಲಘಟ್ಟದಲ್ಲಿ ನಮಗೆ ಇನ್ನಷ್ಟು ಪ್ರಸ್ತುತವಾಗಿದೆ.

ಸರ್ವೇ ಜನಾಃ ಸುಖಿನೋ ಭವಂತು.

ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page