July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊರ್ಡೆಲ್‌ನಲ್ಲಿ ‘ಬೃಹತ್ ಬೈಬಲ್ ಅಧಿವೇಶನ 2026’: ಎರಡನೇ ದಿನ — ಯುವಜನರಿಗಾಗಿ ವಿಶೇಷ ಪ್ರಾರ್ಥನೆ, ಸಹಸ್ರಾರು ಭಕ್ತರ ಸಮ್ಮಿಲನ

ಇಂದು ಸಂಜೆ ಫೆಬ್ರವರಿ 28ರಂದು 3ನೇ ದಿನ –  ಹರಿದು ಬರಲಿರುವ ಜನ ಸಾಗರ

ಮಂಗಳೂರು ಧರ್ಮಕ್ಷೇತ್ರದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಧರ್ಮಕ್ಷೇತ್ರದ ಬೈಬಲ್ ಆಯೋಗದ ಜಂಟಿ ಆಶ್ರಯದಲ್ಲಿ ಕುಲಶೇಕರದ ಕೊರ್ಡೆಲ್‌ನ ಹೋಲಿ ಕ್ರಾಸ್ ಚರ್ಚ್ ಬಯಲು ಮೈದಾನದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ 2026’ ಭಕ್ತಿಪೂರ್ವಕ ವಾತಾವರಣದಲ್ಲಿ ಮುಂದುವರಿಯುತ್ತಿದೆ. “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲಸಿದೆ” (ಕೊಲೊ. 3:16) ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಈ ಮಹಾಧಿವೇಶನದ ಎರಡನೇ ದಿನ, ವಿಶೇಷವಾಗಿ ಯುವಜನರಿಗಾಗಿ ಪ್ರಾರ್ಥನೆ ನಡೆಸಲಾಯಿತು.

ಭವ್ಯ ಉದ್ಘಾಟನೆ, ಪವಿತ್ರ ಬೈಬಲ್ ಮೆರವಣಿಗೆ

ಫೆಬ್ರವರಿ 26ರಂದು ಗುರುವಾರ ಪವಿತ್ರ ಬೈಬಲ್‌ನ ಭವ್ಯ ಮೆರವಣಿಗೆಯೊಂದಿಗೆ ಅಧಿವೇಶನಕ್ಕೆ ಚಾಲನೆ ದೊರಕಿತು. ಬೈಬಲ್ ಅನ್ನು ಬಲಿಪೀಠದ ಮಧ್ಯದಲ್ಲಿ ಪ್ರತಿಷ್ಠಾಪಿಸಿ, ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಟ ಗುರು ಅತೀ ವಂದನೀಯ ಮ್ಯಾಕ್ಸಿಂ ಎಲ್. ನೊರೋನ್ಹಾ ಅವರು ಹೂಮಾಲೆ ಹಾಕಿ ಗೌರವಿಸಿದರು. ಮಂಗಳೂರು ಧರ್ಮಕ್ಷೇತ್ರವು 2026 ಪ್ರಸ್ತುತ ವರ್ಷವನ್ನು ‘ಮಕ್ಕಳ ವರ್ಷ’ವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಐದು ಮಕ್ಕಳಿರುವ ಕುಟುಂಬವೊಂದು ಮೆರವಣಿಗೆಯಲ್ಲಿ ಭಾಗವಹಿಸಿ ನಂಬಿಕೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಂದೇಶ ಸಾರಿತು.
ಮೆರವಣಿಗೆಯ ಬಳಿಕ ಧ್ವಜಾರೋಹಣದ ಮೂಲಕ ಅಧಿವೇಶನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

 

ಪವಿತ್ರ ಬಲಿಪೂಜೆ ಮತ್ತು ಸ್ತುತಿ-ಆರಾಧನೆ:

ಉದ್ಘಾಟನಾ ದಿನ ಪವಿತ್ರ ಬಲಿಪೂಜೆಯನ್ನು ಶ್ರೇಷ್ಟ ಗುರುಗಳಾದ ಮ್ಯಾಕ್ಸಿಂ ಎಲ್. ನೊರೋನ್ಹಾ ಅವರ ನೇತೃತ್ವದಲ್ಲಿ ಅರ್ಪಿಸಲಾಯಿತು. ಬೋಂದೆಲ್ ಚರ್ಚ್‌ನ ಗಾಯನ ಮಂಡಳಿಯ ಸುಮಧುರ ಗಾಯನ ಭಕ್ತರ ಮನಸ್ಸಿಗೆ ಹತ್ತಿತು. ಬ್ರದರ್ ರೋನಿ ಡಿಸೋಜ ಮತ್ತು ತಂಡದವರ ಸ್ತುತಿ-ಆರಾಧನೆ ಕಾರ್ಯಕ್ರಮವು ವಾತಾವರಣವನ್ನು ಆಧ್ಯಾತ್ಮಿಕ ಉತ್ಸಾಹದಿಂದ ತುಂಬಿಸಿತು.

ಆಧ್ಯಾತ್ಮಿಕ ಪ್ರವಚನಗಳು – ಸೃಷ್ಟಿಯಿಂದ ಶರೀರಧಾರಣೆಯವರೆಗೆ:

ಮೊದಲ ದಿನ “ಪ್ರಕಟಣೆ ಮತ್ತು ಶರೀರಧಾರಣೆ: ಮಾತನಾಡುವ ಮತ್ತು ರಕ್ಷಿಸುವ ದೇವರು” ವಿಷಯದಡಿ ನಡೆದ ಪ್ರವಚನಗಳಲ್ಲಿ,

  • ವಂದನೀಯ ಡಾ. ಸ್ಟ್ಯಾನಿ ಗೋವಿಯಸ್ ಅವರು ದೇವರ ವಾಕ್ಯದ ಸೃಜನಶೀಲ ಶಕ್ತಿಯನ್ನು ವಿವರಿಸಿದರು.
  • ವಂದನೀಯ ಫಾದರ್ ಅನಿಲ್ ಕಿರಣ್ ಫೆರ್ನಾಂಡಿಸ್ (SVD) ಅವರು ಯೇಸುಕ್ರಿಸ್ತರು ದೇವರ ವಾಕ್ಯವಾಗಿ ಶರೀರಧಾರಿಯಾಗಿ ನಮ್ಮ ನಡುವೆ ವಾಸಿಸುತ್ತಿರುವ ಮಹತ್ವವನ್ನು ತಿಳಿಸಿದರು.

 

ಎರಡನೇ ದಿನ – ಯುವಜನರಿಗಾಗಿ ವಿಶೇಷ ಪ್ರಾರ್ಥನೆ:

ಫೆಬ್ರವರಿ 27ರಂದು ಶುಕ್ರವಾರ ನಡೆದ ಎರಡನೇ ದಿನದ ಅಧಿವೇಶನವು “ಒಡಂಬಡಿಕೆ ಮತ್ತು ಸಂಸ್ಕಾರ – ಬೆಸೆಯುವ ಮತ್ತು ಪೋಷಿಸುವ ದೇವರು” ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ.
ಪವಿತ್ರ ಜಪಮಾಲೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ವಲಯದ ಶ್ರೇಷ್ಟ ಗುರು ಅತೀ ವಂದನೀಯ ಜೇಮ್ಸ್ ಡಿಸೋಜ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ನಡೆಯಿತು. ಧರ್ಮಕ್ಷೇತ್ರದ ಯುವಜನರ ದೈವಿಕ ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬಲಕ್ಕಾಗಿ ವಿಶೇಷ ಪ್ರಾರ್ಥನೆಗಳು ಸಲ್ಲಿಸಲಾಯಿತು.

ಮುಂದಿನ ಪ್ರವಚನಗಳಲ್ಲಿ:

  • ವಂದನೀಯ ಡಾ. ಆ್ಯಂಟನಿ ಪಿಂಟೊ ಅವರು “ಒಟ್ಟಿಗೆ ನಡೆಯುವುದು: ಒಡಂಬಡಿಕೆಯ ಜನರು” ವಿಷಯದ ಕುರಿತು ಹಳೆ ಒಡಂಬಡಿಕೆಯನ್ನು ಆಧರಿಸಿ ಮಾತನಾಡಿದರು.
  • ವಂದನೀಯ ಡಾ. ರುಡಾಲ್ಫ್ ಪಿಂಟೊ (OCD) ಅವರು “ಎಮ್ಮಾಹುಸ್‌ನ ಹಾದಿ: ಜೀವಂತ ವಾಕ್ಯವನ್ನು ಗುರುತಿಸುವುದು” ವಿಷಯದ ಮೇಲೆ ಹೊಸ ಒಡಂಬಡಿಕೆಯ ಆಧ್ಯಾತ್ಮಿಕ ಅರ್ಥವನ್ನು ವಿವರಿಸಿದರು.

ಸಂಜೆಯ ದಿವ್ಯಸತ್ಪ್ರಸಾದದ ಆರಾಧನೆಯನ್ನು ವಂದನೀಯ ಡಾ. ಜೋಸೆಫ್ ಮಾರ್ಟಿಸ್ ಮುನ್ನಡೆಸಿದರು.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್‌ನ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಆಯೋಗದ ಕಾರ್ಯದರ್ಶಿ ವಂದನೀಯ ಡಾ. ವಿನ್ಸೆಂಟ್ ಸಿಕ್ವೇರಾ, ಡಿಬಿಸಿಎಲ್ಸಿ (ಮಂಗಳಜ್ಯೋತಿ) ನಿರ್ದೇಶಕ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ ಸೇರಿದಂತೆ ಹಲವಾರು ಧರ್ಮಗುರುಗಳು ಮತ್ತು ಕ್ರಿಶ್ಚಿಯನ್ ಮುಂದಾಳುಗಳು ಉಪಸ್ಥಿತರಿದ್ದರು.

ನಾಲ್ಕು ದಿನಗಳ ಈ ಬೃಹತ್ ಅಧಿವೇಶನವು ಮಾರ್ಚ್ 1 ರವರೆಗೆ ಪ್ರತಿದಿನ ಸಂಜೆ 4:00 ರಿಂದ 8:30 ರವರೆಗೆ ನಡೆಯಲಿದೆ. ಭಕ್ತಾಧಿಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು ದೇವರ ವಾಕ್ಯವನ್ನು ಆಲಿಸಿ ಆಶೀರ್ವಾದವನ್ನು ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ವರದಿ ಹಾಗೂ ಫೋಟೊ

ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್

ನಿರ್ದೇಶಕರು ಕೆನರಾ ಕಮ್ಯುನಿಕೇಷನ್ ಸೆಂಟರ್

ಮಂಗಳೂರು ಧರ್ಮಕ್ಷೇತ್ರ

 

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page