August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ನೈಟ್ ಬೀಟ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಕೇರಳಕ್ಕೆ ಓಡಿದ್ದ ಇಬ್ಬರು ಕಿರಾತಕರು ಸಿಸಿಬಿ ಬಲೆಯಲ್ಲಿ!

ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಸಿಮೆಂಟ್ ಶೀಟ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ನಡೆಸಿ ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ 24 ವರ್ಷ ಪ್ರಾಯದ ಸಚಿನ್ ಕೆ.ಆರ್. ಮತ್ತು ಪುತ್ತೂರು ತಾಲೂಕಿನ ನೆಲ್ಯಾಡಿಯ 24 ವರ್ಷ ಪ್ರಾಯದ  ಚಂದನ್ ಬಂಧಿತ ಆರೋಪಿಗಳು.

ಮಧ್ಯರಾತ್ರಿ ನಡೆದಿದ್ದೇನು?

ಮೇ 24ರಂದು ಭಾನುವಾರ ಬೆಳಗಿನ ಜಾವ ಸುಮಾರು 2:10ರ ಸುಮಾರಿಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಬಳಿ ಪೊಲೀಸರು ನೈಟ್ ಬೀಟ್ ಕರ್ತವ್ಯದಲ್ಲಿದ್ದರು. ಈ ವೇಳೆ ಕೆಂಪು ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದ ಈ ಇಬ್ಬರು ಯುವಕರನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಯುವಕರು, ಸ್ಕೂಟರ್ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಅಲ್ಲೇ ಇದ್ದ ಸಿಮೆಂಟ್ ಶೀಟ್ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದಾಗಿ ಪೊಲೀಸ್ ಸಿಬ್ಬಂದಿ ತಲೆಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಉರ್ವ ಪೊಲೀಸ್ ಠಾಣೆಯಲ್ಲಿ (ಅ.ಕ್ರ 57/2026, ಬಿ.ಎನ್.ಎಸ್ ಕಾಯ್ದೆಗಳಡಿ) ಮೊಕದ್ದಮೆ ದಾಖಲಾಗಿತ್ತು.

ಕೇರಳದಲ್ಲಿ ಸಿಸಿಬಿ ಜಾಲಕ್ಕೆ ಬಿದ್ದ ಆರೋಪಿಗಳು!

ಘಟನೆಯ ನಂತರ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರೆರಾಜ್ಯ ಕೇರಳಕ್ಕೆ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿ, ತಾಂತ್ರಿಕ ಸಾಕ್ಷ್ಯಾಧಾರ ಹಾಗೂ ಖಚಿತ ಮಾಹಿತಿ ಮೇರೆಗೆ ಮೇ 26ರಂದು ಮಂಗಳವಾರ ಕೇರಳದ ಕಾಂಞಿಗಾಡ್ ಎಂಬಲ್ಲಿ ಅಡಗಿದ್ದ ಆರೋಪಿಗಳನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕೆಂಪು ಬಣ್ಣದ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದ ಯುವಕರು:

ಬಂಧಿತ ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸಚಿನ್ ಕೆ.ಆರ್. ಎಂಬಾತ ಕುಂಟಿಕಾನದ ‘ಪಾನ್ ಪಾನ್ ಸ್ವೀಟ್ಸ್’ (PON PON Sweets) ಫ್ಯಾಕ್ಟರಿಯಲ್ಲಿ ಚಾಲಕನಾಗಿದ್ದರೆ, ಚಂದನ್ ಕೂಳೂರಿನ ‘ಅದ್ವೈತ್ ಕಿಯಾ’ (Advait Kia) ಶೋರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಮಧ್ಯರಾತ್ರಿ ಅನಗತ್ಯವಾಗಿ ಸುತ್ತಾಡುತ್ತಿದ್ದಾಗ ಪೊಲೀಸರು ಪ್ರಶ್ನಿಸಿದ್ದೇ ಈ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.

You may also like

News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ
News

ಪೊಂಪೈ ಕಾಲೇಜು ಐಕಳದಲ್ಲಿ ಮಾದಕ ವಸ್ತು, ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ

ಯುವಜನತೆ ಜಾಗೃತರಾದರೆ ಸಮಾಜ ಸುಧಾರಣೆ ಸಾಧ್ಯ – ಗಣೇಶ್ ಕುಮಾರ್ ಪೊಂಪೈ ಕಾಲೇಜು ಐಕಳದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಾನವ ಕಳ್ಳಸಾಗಣೆ ವಿರೋಧಿ ಸಂಘ, ಮಾದಕ

You cannot copy content of this page