ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!
ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ ಮೌಲ್ಯದ ಫಾರ್ಚುನರ್ ಕಾರಿನಲ್ಲಿ ಕೆಲಸಕ್ಕೆ ಆಗಮಿಸುವ ಅವರು, ತಮ್ಮ ಪರಿಶ್ರಮ ಹಾಗೂ ಹಠದಿಂದ ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. 1996ರಲ್ಲಿ ದಿನಕ್ಕೆ ಕೇವಲ ₹50 ಕೂಲಿ ಪಡೆದು ಪುರಸಭೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಸೇಸಪ್ಪ ಅವರು, ಆರಂಭದಲ್ಲಿ ಸೈಕಲ್‌ನಲ್ಲೇ ಐದು ವರ್ಷ ಕೆಲಸಕ್ಕೆ ತೆರಳುತ್ತಿದ್ದರು. ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಸಂಚರಿಸುವವರನ್ನು ಕಂಡು, ‘ಒಂದು ದಿನ ನಾನೂ ಕಾರಿನಲ್ಲಿ ಓಡಾಡಬೇಕು’ ಎಂಬ ಕನಸು ಕಂಡಿದ್ದರು.


ಕಾಲಕ್ರಮೇಣ ಪುರಸಭೆಯಲ್ಲಿ ಖಾಯಂ ನೌಕರರಾದ ಬಳಿಕ ಅವರ ಕನಸು ನನಸಾಗುವ ಹಾದಿ ಆರಂಭವಾಯಿತು. ಮೊದಲಿಗೆ ಮಾರುತಿ 800, ಬಳಿಕ ಮಾರುತಿ ಆಮ್ನಿ, ಸ್ವಿಫ್ಟ್, ಆಲ್ಟೋ, ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿದ ಅವರು, ಇದೀಗ 2013ರ ಮಾಡೆಲ್‌ನ ಸೆಕೆಂಡ್‌ಹ್ಯಾಂಡ್ ಟೊಯೊಟಾ ಫಾರ್ಚುನರ್ ಕಾರನ್ನು ಖರೀದಿಸಿದ್ದಾರೆ. ಈ ಎಲ್ಲಾ ವಾಹನಗಳನ್ನು ಸಾಲದ ನೆರವಿನಿಂದಲೇ ಖರೀದಿಸಿರುವುದಾಗಿ ಸೇಸಪ್ಪ ತಿಳಿಸಿದ್ದಾರೆ.

ಕಾಯಕವೇ ಬದುಕಿನ ಶಕ್ತಿ: ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡ್‌ಗೆ ಆಗಮಿಸುವ ಸೇಸಪ್ಪ ಅವರು ಮಧ್ಯಾಹ್ನ 12ರವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ಇಲಾಖೆಯ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಾರೆ. ಬಳಿಕ ಕೂಲಿ ಕೆಲಸಕ್ಕೂ ತೆರಳುವ ಅವರು, ಮನೆಯಲ್ಲಿ ದನ ಸಾಕಣೆ ಮಾಡುವುದರ ಜೊತೆಗೆ ಮನೆಯ ಸಮೀಪದ ಪಂಚಾಯತ್‌ನ ನೀರು ಸರಬರಾಜು ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನೊಳಗೊಂಡ ಸೇಸಪ್ಪ ಅವರ ಕುಟುಂಬ ಸರಳ ಜೀವನ ನಡೆಸುತ್ತಿದೆ. ಮಗ ದೈವ ನೇಮದ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಪುತ್ರಿಯರ ಪೈಕಿ ಒಬ್ಬರು ಉದ್ಯೋಗದಲ್ಲಿದ್ದರೆ ಮತ್ತೊಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸೈಕಲ್‌ನಲ್ಲಿ ಆರಂಭವಾದ ಬದುಕಿನ ಪಯಣ ಇಂದು ಫಾರ್ಚುನರ್ ಕಾರಿನವರೆಗೆ ತಲುಪಿದೆ. ಪರಿಶ್ರಮ, ಹಠ ಮತ್ತು ಕನಸಿದ್ದರೆ ಬಡತನವನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಸೇಸಪ್ಪ ಅವರ ಜೀವನಗಾಥೆ ಸಾರುತ್ತದೆ.



