June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಪೊಲೀಸ್ ಶಾಕ್ – ಒಂದೇ ವಾರದಲ್ಲಿ 1,300 ಕ್ಕಿಂತಲೂ ಹೆಚ್ಚು ಕೇಸ್; ಲಕ್ಷಾಂತರ ರೂಪಾಯಿ ದಂಡ!

ಅಪಘಾತ ತಡೆಗೆ ಮಂಗಳೂರು ಪೊಲೀಸರ ಬಿಗಿ ಕ್ರಮ – ಹೆದ್ದಾರಿ 169 ಕ್ಕೆ ಹೊಸ ಹೈವೇ ಪೆಟ್ರೋಲ್ ವಾಹನ ನಿಯೋಜನೆ

ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಮತ್ತು ಸಾರ್ವಜನಿಕರ ಜೀವ ರಕ್ಷಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಕಳೆದ ಒಂದು ವಾರದಿಂದ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಹಮ್ಮಿಕೊಂಡಿದ್ದ ವಿಶೇಷ ಡ್ರೈವ್‌ನಲ್ಲಿ ಸಾವಿರಾರು ವಾಹನ ಸವಾರರಿಗೆ ಬಿಸಿ ಮುಟ್ಟಿಸಲಾಗಿದೆ.

ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುವುದು ಮತ್ತು ಶಾರ್ಟ್‌ಕಟ್ ಹುಡುಕುತ್ತಾ ‘ರಾಂಗ್ ಸೈಡ್’ (ತಪ್ಪು ಬದಿಯಲ್ಲಿ) ವಾಹನ ಚಲಾಯಿಸುವುದರಿಂದ ಗಂಭೀರ ಅಪಘಾತಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ದಂಡದ ಬೇಟೆ – ಒಂದೇ ವಾರದಲ್ಲಿ ₹ 6.24 ಲಕ್ಷ ವಸೂಲಿ!

ನಗರದ ಪ್ರಮುಖ ಜಂಕ್ಷನ್‌ಗಳು, ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಸೇರಿದಂತೆ ಅಪಘಾತ ವಲಯಗಳಲ್ಲಿ ಪೊಲೀಸರು ನಡೆಸಿದ ತಪಾಸಣೆಯ ಅಂಕಿ-ಅಂಶಗಳು ಹೀಗಿವೆ:

ಹೆಲ್ಮೆಟ್ ರಹಿತ ಚಾಲನೆ – 1,050 ಪ್ರಕರಣಗಳು – ₹ 4,63,500/-

ರಾಂಗ್ ಸೈಡ್ ಚಾಲನೆ – 322 ಪ್ರಕರಣಗಳು – ₹ 1,61,000/-

ಒಟ್ಟು ದ್ವಿಚಕ್ರ ವಾಹನಗಳು – 1,372 ಪ್ರಕರಣಗಳು – 6,24,500/-

ಪೊಲೀಸ್ ಇಲಾಖೆಯ ಕಳಕಳಿ: “ಸಮಯ ಉಳಿಸುವ ಸಣ್ಣ ನಿರ್ಲಕ್ಷ್ಯ ಮುಖಾಮುಖಿ ಡಿಕ್ಕಿಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ಅಪಘಾತಗಳಲ್ಲಿ ತಲೆಗೆ ಗಂಭೀರ ಗಾಯವಾಗಿ ಸಾವು-ನೋವುಗಳು ಹೆಚ್ಚುತ್ತಿರುವುದರಿಂದಲೇ ಈ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ.”

ರಾಷ್ಟ್ರೀಯ ಹೆದ್ದಾರಿ 169 ಕ್ಕೆ ಹೆಚ್ಚುವರಿ ಹೈವೇ ಪೆಟ್ರೋಲ್!

ಅಪಘಾತಗಳ ತಡೆ ಹಾಗೂ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ರಾ.ಹೆ 169ರ (ಬಿಕರ್ನಕಟ್ಟೆ – ಮೂಡಬಿದ್ರೆ – ಬೆಳುವಾಯಿ ರಸ್ತೆ) ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬೈತುರ್ಲಿಯಿಂದ ಮೀಜಾರ್ ವರೆಗಿನ ಸುಮಾರು 20 ಕಿಲೋಮೀಟರ್ ವ್ಯಾಪ್ತಿಗೆ ಹೆಚ್ಚುವರಿಯಾಗಿ ಹೊಸ ‘ಹೈವೇ ಪೆಟ್ರೋಲ್’ ವಾಹನವನ್ನು ನಿಯೋಜಿಸಲಾಗಿದೆ. ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಒಂದು ಪೆಟ್ರೋಲಿಂಗ್ ವಾಹನ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹೆಚ್ಚುವರಿ ವಾಹನ ಸೇರ್ಪಡೆಯಾಗಿದೆ. ಈ ವಾಹನಗಳು ಸಾರ್ವಜನಿಕರ ಸುರಕ್ಷತೆಗಾಗಿ ದಿನದ 24 ಗಂಟೆಯೂ (24X7) ಹೆದ್ದಾರಿಯಲ್ಲಿ ಕಾವಲು ಕಾಯಲಿವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at
News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್

You cannot copy content of this page