September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

30 ವರ್ಷಗಳ ಕಾಲ ಜ್ಞಾನದ ದೀಪ ಬೆಳಗಿಸಿದ ಶಿಕ್ಷಕಿ ಜುಲಿಯಾನ ಡಯಾಸ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ಸಾವಿರಾರು ವಿದ್ಯಾರ್ಥಿಗಳ ಮನ ಗೆದ್ದ ಶಿಕ್ಷಕಿ

ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಜ್ಞಾನದ ಬೆಳಕು ಹರಡಿದ ಬೈಂದೂರು ಕುಂದಾಪುರದಲ್ಲಿನ ಶಿಕ್ಷಕಿ ಜುಲಿಯಾನ ಡಯಾಸ್ ಅವರು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ. ತಮ್ಮ ಬೋಧನಾ ಬದುಕಿನ ಆರಂಭವನ್ನು ಅಯ್ಯಂಗಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎರಡುವರೆ ವರ್ಷಗಳ ಸೇವೆಯೊಂದಿಗೆ ಆರಂಭಿಸಿದ ಅವರು, ಬಳಿಕ ತಲ್ಲೂರಿನ ಕೋಟೆಬಾಗಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 27 ವರ್ಷಗಳಿಗಿಂತ ಅಧಿಕ ಸುದೀರ್ಘ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದರು. ನಂತರ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಅಲ್ಪಾವಧಿಯ ಸೇವೆ ಸಲ್ಲಿಸಿ ಗೌರವಯುತವಾಗಿ ನಿವೃತ್ತಿ ಹೊಂದಿದ್ದಾರೆ.

ಸರಳತೆ, ಸಜ್ಜನಿಕೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಮೇಲಿನ ಅಪಾರ ಪ್ರೀತಿ-ಕಾಳಜಿಯಿಂದ ಶಿಕ್ಷಕಿ ಜುಲಿಯಾನ ಡಯಾಸ್ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಹೋದ್ಯೋಗಿಗಳ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಪಾಠ ಬೋಧನೆಯನ್ನು ಕೇವಲ ಪಠ್ಯಕ್ರಮಕ್ಕೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಅವರ ಸೌಮ್ಯ ಸ್ವಭಾವ, ಆತ್ಮೀಯ ನಡೆ ಮತ್ತು ಸಮರ್ಪಿತ ಸೇವೆಯಿಂದ ಅನೇಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಹಲವರು ಇಂದು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ತಮ್ಮ ಶಿಕ್ಷಕಿಯ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಕೋಟೆಬಾಗಿಲು-ತಲ್ಲೂರು ಗ್ರಾಮಸ್ಥರೊಂದಿಗೂ ಅವರು ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು. ಗ್ರಾಮಸ್ಥರು ಅವರನ್ನು ತಮ್ಮ ಕುಟುಂಬದ ಸದಸ್ಯೆಯಂತೆಯೇ ಪ್ರೀತಿಸುತ್ತಿದ್ದರೆ, ಶಿಕ್ಷಕಿ ಜುಲಿಯಾನ ಡಯಾಸ್ ಅವರೂ ಜನರೊಂದಿಗೆ ಅತ್ಯಂತ ಆತ್ಮೀಯತೆಯಿಂದ ಬೆರೆತು ಸಮಾಜದ ವಿಶ್ವಾಸ ಗಳಿಸಿದ್ದರು.

ಸುಮಾರು 30 ವರ್ಷಗಳ ಕಾಲ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡು ಜ್ಞಾನ ದಾನ ಎಂಬ ಮಹತ್ತರ ಕಾರ್ಯದ ಮೂಲಕ ಸಮಾಜ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದ ಅವರ ನಿವೃತ್ತಿ ಶಾಲಾ ವಲಯ ಹಾಗೂ ಗ್ರಾಮಸ್ಥರಲ್ಲಿ ಭಾವನಾತ್ಮಕ ಕ್ಷಣಕ್ಕೆ ಕಾರಣವಾಗಿದೆ. ಅವರ ಮುಂದಿನ ನಿವೃತ್ತ ಜೀವನವು ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಹಾಗೂ ದೇವರ ಕೃಪಾಶೀರ್ವಾದದಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೃತ್ಪೂರ್ವಕವಾಗಿ ಶುಭ ಹಾರೈಸಿದ್ದಾರೆ.

You may also like

News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು
News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ

You cannot copy content of this page