June 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೂನ್ 30ರಿಂದ BLOಗಳಿಂದ SIR ಮನೆ ಭೇಟಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಭಾರತದ ಚುನಾವಣಾ ಆಯೋಗದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣ (SIR) ಜೂನ್ 30ರಿಂದ BLOಗಳ ಮನೆ ಭೇಟಿಯ ಮೂಲಕ ಆರಂಭಗೊಳ್ಳಲಿದೆ. ಈ ಮನೆ ಭೇಟಿ ಪ್ರಕ್ರಿಯೆ ಜುಲೈ 29ರವರೆಗೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಜೂನ್ 4ರಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಈ ಎಸ್‌ಐಆರ್ ಜೂನ್ 1ರಿಂದ ಅರ್ಹತಾ ದಿನವನಾಗಿ ಪರಿಗಣಿಸಿ ಪ್ರಕ್ರಿಯೆ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳ ಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯ ಜೂನ್ 20ರಿಂದ ಜುಲೈ 29ರವರೆಗೆ ನಡೆಯಲಿದೆ. ಬಳಿಕ ಒಂದು ತಿಂಗಳು ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಭೇಟಿ ಮಾಡಲಿದ್ದಾರೆ. ಜುಲೈ 29ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ನಡೆಯಲಿದೆ. ಎಸ್‌ಐಆರ್ ಅಪರ ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿರುತ್ತಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ 8 ಜನ ಮತದಾರರ ನೋಂದಣಾಧಿಕಾರಿ (ಇಆರ್‌ಒ), 10 ಸಹಾಯಕ ಮತದಾರರ ನೋಂದಣಾಧಿಕಾರಿ (ಎಇಆರ್‌ಒ), 206 ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ಹಾಗೂ 1876 ಮತಗಟ್ಟೆ ಮಟ್ಟದ ಅಧಿಕಾರಿಗಳು ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಮ್ಯಾಪಿಂಗ್‌ನಿಂದ ಹೊರಗುಳಿದ ಮತದಾರರು :

ಮಂಗಳೂರು ನಗರ ಉತ್ತರ ಮತ್ತು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಪಿಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಹೊರಗುಳಿದಿದ್ದಾರೆ. ಬೆಳ್ತಂಗಡಿಯಲ್ಲಿ 9,637, ಮೂಡಬಿದಿರೆಯಲ್ಲಿ 20,128, ಮಂಗಳೂರು ನಗರ ಉತ್ತರದಲ್ಲಿ 50558, ಮಂಗಳೂರು ನಗರ ದಕ್ಷಿಣದಲ್ಲಿ 63,853, ಮಂಗಳೂರು ಕ್ಷೇತ್ರದಲ್ಲಿ 25,042, ಬಂಟ್ವಾಳದಲ್ಲಿ 14,430, ಪುತ್ತೂರಿನಲ್ಲಿ 15,802, ಸುಳ್ಯದಲ್ಲಿ 7016 ಮಂದಿ ಮತದಾರರು ಈಗಾಗಲೇ ನಡೆದಿರುವ ಮ್ಯಾಪಿಂಗ್‌ಗೆ ಒಳಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಪರಿಷ್ಕರಣೆ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಆಕರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಹಾಗೂ ಭಾರತದ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಉಪಸ್ಥಿತರಿದ್ದರು.

ಎಸ್‌ಐಆರ್‌ಗೆ ಸಲ್ಲಿಸಬೇಕಾದ ದಾಖಲೆಗಳು:

*ಯಾವುದೇ ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಉದ್ಯಮದ ಖಾಯಂ ಉದ್ಯೋಗಿ, ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ, ಪಿಂಚಣಿ ಸಂದಾಯ ಆದೇಶ.

*ಭಾರತದಲ್ಲಿ 1987ರ ಜುಲೈ 1ರ ಮೊದಲು ಸರಕಾರ, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಜೀವವಿಮಾ ನಿಗಮ, ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಗುರುತಿನ ಚೀಟಿ, ಪ್ರಮಾಣ ಪತ್ರ ಅಥವಾ ದಸ್ತಾವೇಜು.

*ಸಕ್ಷಮ ಪ್ರಾಧಿಕಾರ ನೀಡಿರುವ ಜನನ ಪ್ರಮಾಣಪತ್ರ.

*ಪಾಸ್‌ಪೋರ್ಟ್.

*ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾನಿಲಯಗಳು ನೀಡಿರುವ ಮೆಟ್ರಿಕ್ಯುಲೇಶನ್ ಶೈಕ್ಷಣಿಕ ಪ್ರಮಾಣ ಪತ್ರ.

*ರಾಜ್ಯ ಸಕ್ಷಮ ಪ್ರಾಧಿಕಾರ ನೀಡಿರುವ ಖಾಯಂ ನಿವಾಸ ಪ್ರಮಾಣ ಪತ್ರ.

*ಅರಣ್ಯ ಹಕ್ಕು ಪ್ರಮಾಣಪತ್ರ.

*ಸಕ್ಷಮ ಪ್ರಾಧಿಕಾರಿ ನೀಡಿರುವ ಒಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಯಾವುದೇ ಜಾತಿ ಪ್ರಮಾಣ ಪತ್ರ

*ರಾಷ್ಟ್ರೀಯ ಪೌರತ್ವ ರಿಜಿಸ್ಟರ್ .

*ರಾಜ್ಯ, ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ರಿಜಿಸ್ಟರ್.

*ಸರಕಾರ ನೀಡಿರುವ ಯಾವುದೇ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ.

 ಜೂನ್ 16ರವರೆಗೆ ಸೇರ್ಪಡೆಗೆ ಅವಕಾಶ:

ಜೂನ್ 4ರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರಿದ್ದು, ಜೂನ್ 16ರವರೆಗೆ ಸೇರ್ಪಡೆಗೊಳ್ಳುವ ಎಲ್ಲಾ ಮತದಾರರು ಈ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡುತ್ತಾರೆ. ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳು ತೆರಳಿ ಗಣತಿ ನಮೂನೆಯ 2 ಪ್ರತಿಗಳನ್ನು ನೀಡಲಿದ್ದಾರೆ. ಬಿಎಲ್‌ಒಗಳ ಹಸ್ತಾಕ್ಷರವಿರುವಂತಹ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇರಿಸಿಕೊಂಡು ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಇರುವಂತೆ ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಆ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಮತದಾರರ ಭಾವಚಿತ್ರ ಹಳೆಯದಾಗಿದ್ದರೆ, ಬಿಎಲ್‌ಗಳು ನೀಡಿರುವ ಪ್ರತಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. 2002ರ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಭರ್ತಿ ಮಾಡಲು ಮತದಾರರಿಗೆ ಸಹಕರಿಸಲು ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಸೌಕರ್ಯ ಕೇಂದ್ರ (ವೋಟರ್ ಫೆಸಿಲಿಟೇಶನ್ ಸೆಂಟರ್)ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳಾಪಟ್ಟಿ:

*ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಗಳಿಂದ ಮನೆ ಮನೆ ಭೇಟಿ.

* ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟ.

* ಆಗಸ್ಟ್ 5ರಿಂದ ಸೆಪ್ಟಂಬರ್ 4 ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ.

*ಆಗಸ್ಟ್ 8ರಿಂದ ಅಕ್ಟೋಬರ್ 3ರವರೆಗೆ ನೋಟೀಸ್ ಹಂತ ಮತ್ತು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ.

*ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ.

ಮ್ಯಾಪಿಂಗ್ ಆಗದವರು ದಾಖಲೆ ನೀಡಿ:

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಕ್ತ 18,05,189 ಮತದಾರರಲ್ಲಿ 15,98,723ರಷ್ಟು ಮತದಾರರು 2002ರ ಮತದಾರರ ಪಟ್ಟಿಯಲ್ಲಿ ಇದ್ದ ವಿವರ/ಸಂಬಂಧಿಯ ಮಾಹಿಯನ್ನು ಬಿಎಲ್‌ಒಗಳಿಗೆ ನೀಡಿ 2025ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಕಾರ್ಯ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 88.56ರಷ್ಟು ಮ್ಯಾಪಿಂಗ್ ಕಾರ್ಯ ನಡೆದಿದೆ.  ಉಳಿದ 2,06,723 ಮತದಾರರು ಇನ್ನೂ ಎಸ್‌ಐಆರ್‌ಗೆ ಒಳಪಟ್ಟಿಲ್ಲ. ಹಾಗಾಗಿ ಅರ್ಹ ಮತದಾರರು ಬಿಎಲ್‌ಒಗಳ ಮೂಲಕ ದಾಖಲೆ ನೀಡಿದರೆ ಅನುಕೂಲ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.

ಈಗಾಗಲೇ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ನಡೆಸಿ ಆಯಾ ಮತಗಟ್ಟೆಗಳ ಚುನಾವಣಾ ಏಜೆಂಟ್‌ಗಳ ಮೂಲಕ ಪಟ್ಟಿಯಿಂದ ಬಿಟ್ಟು ಹೋದ ಮತದಾರ ಮಾಹಿತಿ ಸಂಗ್ರಹಿಸಿ ದಾಖಲೆ ನೀಡುವಂತೆ ಸೂಚನೆ ನೀಡಲಾಗಿದೆ. ಯಾವೊಬ್ಬ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗಬಾರದು. ಹಾಗೆಯೇ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಗೊಳ್ಳಬಾರದು ಎಂಬುದು ನಮ್ಮ ಉದ್ದೇಶ ಎಂದು ಜಿಲ್ಲಾಧಿಕಾರಿ ತಿಳಿಸಿದರು.

You may also like

News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at
News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್

You cannot copy content of this page