ಚಿಕಿತ್ಸೆ ಫಲಿಸದೆ 5 ವರ್ಷದ ಬಾಲಕಿ ನಿಧನ
ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ದುರ್ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಅಲ್ಲಿಪಾದೆಯ ಅನೇಜ ಛಾಯ ಅವರ ಪುತ್ರಿ ಅರ್ನಿಕಾ ಎಂದು ಗುರುತಿಸಲಾಗಿದೆ.



ಆಕೆ ಬಂಟ್ವಾಳದ ದೇವಳ ಶಾಲೆಯಲ್ಲಿ ಯು.ಕೆ.ಜಿ. ವಿದ್ಯಾರ್ಥಿನಿಯಾಗಿದ್ದಳು. ಮಾಹಿತಿಯ ಪ್ರಕಾರ, ಅರ್ನಿಕಾ ಶುಕ್ರವಾರ ಎಂದಿನಂತೆ ಶಾಲೆಗೆ ತೆರಳಿದ್ದಳು. ಬಳಿಕ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬರದೆ ಮಂಗಳವಾರ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಯ ಅಕಾಲಿಕ ನಿಧನ ಕುಟುಂಬಸ್ಥರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಉಂಟುಮಾಡಿದೆ.




