October 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ

ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು, ಮರಣೋತ್ತರ ಪರೀಕ್ಷೆ ನಡೆಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದರೆಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂಶಯಾಸ್ಪದವಾಗಿ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಸುಮಾರು ಎರಡು ತಿಂಗಳ ಬಳಿಕ ದಫನಭೂಮಿಯಿಂದ ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೊ ಅವರು ಕಳೆದ ಜುಲೈ 19ರಂದು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಅವರ ಸಾವಿನ ಕುರಿತು ಕುಟುಂಬದ ಇತರ ಸದಸ್ಯರು ಹಾಗೂ ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡದೆ, ಜೊತೆಗಿದ್ದ ಮಗಳು ಮಾಯಾ ರೇಗೊ ಅವರು ಆಪ್ತರ ನೆರವಿನಿಂದ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ನೆರವೇರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆಲ್ಬರ್ಟ್ ರೇಗೊ ಅವರ ಸ್ನೇಹಿತ ಹೆರಾಲ್ಡ್ ಪಿರೇರಾ ಅವರು ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಯಾ ರೇಗೊ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ, ಆಲ್ಬರ್ಟ್ ರೇಗೊ ಅವರ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಒತ್ತಾಯಿಸಲಾಗಿತ್ತು ಹಾಗೂ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಹಣದ ವಿಚಾರದಲ್ಲಿ ಇತರರ ನೆರವಿನಿಂದ ತಂದೆಯನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಮಾಡಲಾಗಿದೆ. ಪ್ರಕರಣದಲ್ಲಿ ವೈದ್ಯರೊಬ್ಬರು ಹಾಗೂ ಪೊಲೀಸ್ ಸಿಬ್ಬಂದಿಯೊಬ್ಬರ ಸಹಕಾರದ ಬಗ್ಗೆಯೂ ದೂರಿನಲ್ಲಿ ಆರೋಪಿಸಲಾಗಿದೆ.

ಆಲ್ಬರ್ಟ್ ರೇಗೊ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇತರ ಇಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದು, ಒಬ್ಬ ಮಗಳು ಮಾತ್ರ ಅವರೊಂದಿಗೆ ವಾಸಿಸುತ್ತಿದ್ದರು. ಮಗಳ ಕಿರುಕುಳ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮಗಾಗುತ್ತಿದ್ದ ತೊಂದರೆಗಳ ಬಗ್ಗೆ ಆಲ್ಬರ್ಟ್ ಅವರು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಉರ್ವಾ ಪೊಲೀಸರು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಆಲ್ಬರ್ಟ್ ರೇಗೋ ಅವರ ಶವವನ್ನು ಕುಂಟಿಕಾನ ಸಮೀಪದ ದೆರೆಬೈಲ್ ಚರ್ಚ್ ಆವರಣದಲ್ಲಿರುವ ದಫನಭೂಮಿಯಿಂದ ಹೊರತೆಗೆದು ವೈಜ್ಞಾನಿಕ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದಾರೆ.

FSL ತಜ್ಞರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ದಫನ ಮಾಡಲಾಗಿದ್ದ ಶವದ ಅವಶೇಷಗಳನ್ನು ಹೊರತೆಗೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರೋಪಿತ ಮಾಯಾ ರೇಗೊ ಹಾಗೂ ದೂರುದಾರರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

FSL ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಆಲ್ಬರ್ಟ್ ರೇಗೊ ಅವರ ಸಾವಿನ ನಿಖರ ಕಾರಣ ಹಾಗೂ ಪ್ರಕರಣದ ವಾಸ್ತವಾಂಶಗಳು ಸ್ಪಷ್ಟವಾಗಲಿವೆ.

You may also like

News

ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ

“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” –  ಫಾದರ್ ಅರುಣ್ ವಿಲ್ಸನ್ ಲೋಬೊ ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು
News

ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿಯಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆ

‘ಸುರಕ್ಷಿತ ಸ್ಥಳದಲ್ಲಿರಿ, ದೃಢೀಕರಿಸದ ವಿಡಿಯೋ–ಸುದ್ದಿ ಹಂಚಿಕೊಳ್ಳಬೇಡಿ’ ಎಂದು ರಾಯಭಾರ ಕಚೇರಿ ಸೂಚನೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಯೆಮೆನ್‌ನ

You cannot copy content of this page