ನಿವೃತ್ತ ಶಿಕ್ಷಕಿ ಡಯಾನ ಡಿಸಿಲ್ವ ಹೃದಯಾಘಾತದಿಂದ ನಿಧನ
33 ವರ್ಷಗಳ ಶಿಕ್ಷಕ ಸೇವೆಯ ಬಳಿಕ ಬದುಕಿನ ಪಯಣಕ್ಕೆ ವಿದಾಯ

ಕಟಪಾಡಿ: ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನವೆಂಬರ್ 21ರಂದು ಕಟಪಾಡಿ ಮೂಡಬೆಟ್ಟು ಸರಕಾರಿಗುಡ್ಡೆಯ ಮನೆಯಲ್ಲಿ ನಡೆದಿದೆ.
ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ 63 ವರ್ಷ ಪ್ರಾಯದ ಡಯಾನ ಡಿಸಿಲ್ವ ಮೃತರು.

ನವೆಂಬರ್ 21ರ ಸಂಜೆ ಡಯಾನ ಅವರು ಪತಿ, ಶಂಕರಪುರ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಜಾರ್ಜ್ ಡಿಸಿಲ್ವ ಅವರೊಂದಿಗೆ ಚಹಾ ಸೇವಿಸಿದ್ದರು. ಬಳಿಕ ಪತಿ ಲೋಟವನ್ನು ಒಳಗಿಡಲು ತೆರಳಿದಾಗ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಪುತ್ರಿಯ ವಿವಾಹ ಸಮಾರಂಭದಲ್ಲಿ ಕುಟುಂಬದವರೊಂದಿಗೆ ಸಂತಸದಿಂದ ಪಾಲ್ಗೊಂಡಿದ್ದ ಡಯಾನ ಅವರು ಪತಿ ಜಾರ್ಜ್ ಡಿಸಿಲ್ವ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.




