July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೀಟ್ ಪರೀಕ್ಷೆ – ಮಂಗಳೂರಿನ 12 ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಣೆ

ದಿನಾಂಕ 21-06-2026 ರಂದು ನಡೆಯಲಿರುವ 2026ನೇ ಸಾಲಿನ ನೀಟ್ (NEET-UG) ಪರೀಕ್ಷೆಯು ಸುಗಮವಾಗಿ, ನ್ಯಾಯಸಮ್ಮತವಾಗಿ ಹಾಗೂ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಟ್ಟು 12 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಕೆ. ರವಿಶಂಕರ್ ಅವರು ಈ ಕೆಳಗಿನಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ನಿಷೇಧಿತ ವಲಯದಲ್ಲಿ ಜಾರಿಯಲ್ಲಿರುವ ಪ್ರಮುಖ ನಿಯಮಗಳು:

* ಜೆರಾಕ್ಸ್ ಅಂಗಡಿಗಳು ಬಂದ್: ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

* ಅಕ್ರಮಗಳಿಗೆ ತಡೆ: ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು (ಕಾಪಿ) ಮಾಡುವುದು, ಚೀಟಿ ಅಥವಾ ಇತರ ಸಾಧನಗಳ ಮೂಲಕ ಉತ್ತರಿಸುವುದು ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಹಕರಿಸುವ ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

* ಗುಂಪು ಕೂಡುವಿಕೆಗೆ ನಿರ್ಬಂಧ: ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಪರೀಕ್ಷಾ ಕೇಂದ್ರಗಳ ಸುತ್ತ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಕೂಡುವುದನ್ನು ಹಾಗೂ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ.

* ಆಯುಧಗಳ ಸಾಗಾಟ ನಿಷೇಧ: ನಿಷೇಧಿತ ವಲಯದಲ್ಲಿ ಆ್ಯಸಿಡ್, ಸ್ಫೋಟಕ ವಸ್ತುಗಳು, ಮಾರಕ ಆಯುಧಗಳು ಅಥವಾ ಯಾವುದೇ ತರಹದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷೆಯನ್ನು ಯಾವುದೇ ದೋಷವಿಲ್ಲದೆ ಶಾಂತ ವಾತಾವರಣದಲ್ಲಿ ನಡೆಸಲು ಸಾರ್ವಜನಿಕರು ಹಾಗೂ ಪರೀಕ್ಷಾರ್ಥಿಗಳು ಈ ಆದೇಶಕ್ಕೆ ಬದ್ಧರಾಗಿ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page