August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನಿರಾಕರಣೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಹಾಗೂ ಅಹೋರಾತ್ರಿ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಪವನ್ ಕುಮಾರ್ ಶಿರ್ವ ಎಚ್ಚರಿಕೆ

ಅವಿಭಾಜ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 70,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಭೋವಿ ಜನಾಂಗದವರಿಗೆ ಕಳೆದ 7-8 ವರ್ಷಗಳಿಂದ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡದೆ ಸತಾಯಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಭೋವಿ ಸಮಾಜದ ಪ್ರಮುಖ ಸಾಮಾಜಿಕ ಹೋರಾಟಗಾರರಾದ ಪವನ್ ಕುಮಾರ್ ಶಿರ್ವ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲಾಯಿ 16ರಂದು ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, “ಭಾರತ ಸರ್ಕಾರದ ಅಧಿಸೂಚನೆ ಸಂಖ್ಯೆ BC12016/34/76-SCT-5 (ದಿನಾಂಕ 27-07-1997) ರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ 101 ಜಾತಿಗಳನ್ನು ಪರಿಶಿಷ್ಟ ಜಾತಿಗೆ (SC) ಸೇರಿಸಲಾಗಿದ್ದು, ಅದರಲ್ಲಿ ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ದೇಶದ ಸಂಸತ್ತಿನಲ್ಲಿಯೂ ಭೋವಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ವಿಧೇಯಕಕ್ಕೆ ರಾಷ್ಟ್ರಪತಿಯವರು ಈಗಾಗಲೇ ಅಂಕಿತ ಹಾಕಿದ್ದಾರೆ. ಹೀಗಿದ್ದರೂ ಕರಾವಳಿ ಜಿಲ್ಲೆಗಳ ಅಧಿಕಾರಿಗಳು ಜನಾಂಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ದೂರಿದರು.

ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ:

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೋವಿ ಸಮುದಾಯದ ಬಡ ಜನರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ‘ವಲಸೆ ಪ್ರಮಾಣ ಪತ್ರ’ (Migration Certificate) ಕಡ್ಡಾಯ ಎಂದು ಹೇಳಿ ಜನರನ್ನು ಅಲೆದಾಡಿಸುತ್ತಿದ್ದಾರೆ. ಆದರೆ ಯಾವುದೇ ಸರ್ಕಾರವಾಗಲಿ ಅಥವಾ ಹೈಕೋರ್ಟ್ ಆಗಲಿ ಭೋವಿ ಜನಾಂಗಕ್ಕೆ ವಲಸೆ ಪ್ರಮಾಣ ಪತ್ರ ಕಡ್ಡಾಯ ಎಂದು ಎಲ್ಲೂ ಆದೇಶಿಸಿಲ್ಲ ಎಂದು ಪವನ್ ಕುಮಾರ್ ಸ್ಪಷ್ಟಪಡಿಸಿದರು.

ತಂದೆಗೆ ಎಸ್‌ಸಿ, ಮಕ್ಕಳಿಗೆ ಪ್ರವರ್ಗ-1: ಅಧಿಕಾರಿಗಳ ವಿರುದ್ಧ ಆಕ್ರೋಶ:-

ಅಧಿಕಾರಿಗಳ ಬೇಜವಾಬ್ದಾರಿತನ ಎಷ್ಟು ಮಿತಿ ಮೀರಿದೆಯೆಂದರೆ, ಒಂದೇ ಕುಟುಂಬದ ತಂದೆ ಮತ್ತು ಮಕ್ಕಳಿಗೆ ಬೇರೆ ಬೇರೆ ಜಾತಿಯ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ತಂದೆಗೆ ಪರಿಶಿಷ್ಟ ಜಾತಿ (SC) ಎಂದು ನೀಡಿದರೆ, ಮಕ್ಕಳಿಗೆ ಪ್ರವರ್ಗ-1 (Category-1) ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಧಿಕಾರಿಗಳು ತಾವೇ ಸಂವಿಧಾನ ರಚಿಸಿದವರಂತೆ ತಮಗೆ ಇಷ್ಟ ಬಂದ ರೀತಿಯಲ್ಲಿ ಜಾತಿ ನಮೂದಿಸುತ್ತಿರುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧವಾಗಿದೆ. ಅಧಿಕಾರಿಗಳ ಈ ದ್ವಂದ್ವ ನೀತಿಯಿಂದಾಗಿ ಬಡ ಕುಟುಂಬಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ:

ಈಗಾಗಲೇ ಈ ಅನ್ಯಾಯದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಅಲ್ಲಿಯೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಭೋವಿ ಸಮಾಜ ಸಿದ್ಧವಾಗಿದೆ. ಕೇವಲ ನ್ಯಾಯಾಲಯದ ಹೋರಾಟ ಮಾತ್ರವಲ್ಲದೆ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್, ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು. ಭೋವಿ ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಮತ್ತು ಅಧಿಕಾರಿಗಳು ಸೂಕ್ತ ಪರಿಹಾರ ನೀಡುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪವನ್ ಕುಮಾರ್ ಶಿರ್ವ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ.

 

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page