ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ – ಪ್ರಮುಖ ಆರೋಪಿ ಶಾಖಿರ್ ಬಂಧನ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ನಡೆದ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಇನ್ನಿತರ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜುಲಾಯಿ 13ರಂದು ಪರಂಗಿಪೇಟೆಯ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು ಒಳನುಗ್ಗಿದ ದುಷ್ಕರ್ಮಿಗಳು ಬ್ಯಾಂಕಿನಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲು ಯತ್ನಿಸಿದ್ದರು. ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.106/2026ರಡಿ ಭಾರತೀಯ ನ್ಯಾಯ ಸಂಹಿತೆ (BNS-2023)ಯ ಕಲಂ 331(3), 331(4), 305(a) ಹಾಗೂ 62ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖೆ ವೇಳೆ ಆರೋಪಿಗಳ ಪೈಕಿ ಬಂಟ್ವಾಳದ ಮಾರಿಪಳ್ಳ ನಿವಾಸಿ 33 ವರ್ಷ ಪ್ರಾಯದ ಮೊಹಮ್ಮದ್ ಶಾಖಿರ್ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಜುಲೈ 22ರಂದು ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಇತರೆ ಆರೋಪಿಗಳ ಪತ್ತೆ ಹಾಗೂ ಕಳವು ಯತ್ನದ ಸಂಪೂರ್ಣ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




