ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!
ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್ ಅಂತಾರಾಜ್ಯ ವಂಚಕ, ‘ಇಂಟರ್‌ಪೋಲ್ ರೆಡ್ ಕಾರ್ನರ್’ ನೋಟಿಸ್ ಎದುರಿಸುತ್ತಿದ್ದ 64 ವರ್ಷ ಪ್ರಾಯದ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ ಎಂಬಾತನನ್ನು ಮಂಗಳೂರು ನಗರ ಸಿಸಿಬಿ (CCB) ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಸಿಸಿಬಿಯ ಸಮಯೋಚಿತ ಭರ್ಜರಿ ಕಾರ್ಯಾಚರಣೆ:
ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಶ್ರೀಮಂತರನ್ನೇ ಗುರಿಯಾಗಿಸಿಕೊಂಡು, ‘ತಾನು ಉನ್ನತ ಮಟ್ಟದ ತನಿಖಾಧಿಕಾರಿ, ನಿಮ್ಮ ಪ್ರಕರಣ ಇತ್ಯರ್ಥಪಡಿಸುತ್ತೇನೆ’ ಎಂದು ನಂಬಿಸಿ ಆತನ ಗ್ಯಾಂಗ್ ಮೂಲಕ ಸುಲಿಗೆ ಮಾಡುತ್ತಿದ್ದ.
ಈ ಹಿಂದೆ ದಿನಾಂಕ 16-08-2019 ರಂದು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ್ದ ಮಂಗಳೂರು ಕದ್ರಿ (ಪೂರ್ವ) ಠಾಣೆ ಪೊಲೀಸರು, ಈತನನ್ನು ಹಾಗೂ ಈತನ 8 ಜನರ ಗ್ಯಾಂಗ್ ಅನ್ನು ಕೋವಿ ಮತ್ತು ಮಾರಕಾಸ್ತ್ರಗಳೊಂದಿಗೆ ಬಂಧಿಸಿದ್ದರು. ಆ ಸಮಯದಲ್ಲಿ ಆತನ ಬಂಧನದಿಂದಾಗಿ ಆತನ ವಿರುದ್ಧ ಜಾರಿಯಾಗಿದ್ದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ರದ್ದಾಗಿತ್ತು. ಆದರೆ, ಸೆಪ್ಟೆಂಬರ್ 2023 ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಆರೋಪಿ, ಮತ್ತೆ ತಲೆಮರೆಸಿಕೊಂಡು ತನ್ನ ವಂಚನೆ ಜಾಲವನ್ನು ಮುಂದುವರಿಸಿದ್ದನು ಹಾಗೂ ಕೋರ್ಟ್ ವಿಚಾರಣೆಗೆ ಗೈರಾಗಿದ್ದನು.

11 ಹೆಸರುಗಳು, 17ಕ್ಕೂ ಹೆಚ್ಚು ಪ್ರಕರಣಗಳು:
ಆರೋಪಿ ಸ್ಯಾಮ್ ಪೀಟರ್ ಪೊಲೀಸರಿಂದ ಹಾಗೂ ತನಿಖಾ ಸಂಸ್ಥೆಗಳಿಂದ ಬಚಾವಾಗಲು ಒಂದೊಂದು ಊರಿನಲ್ಲಿ ಒಂದೊಂದು ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದ. ತನಿಖೆಯ ವೇಳೆ ಈತನಿಗೆ ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ರಾಬಿನ್ ಸನ್, ಆಂಟೋನಿ ಪ್ರಾನ್ಸಿಸ್, ಶಾರೂನ್ ಪ್ರಾನ್ಸಿಸ್ ಮತ್ತು ಇತ್ತೀಚೆಗೆ ‘ಡ್ಯಾನಿ ತಾರಕನ್’ ಸೇರಿದಂತೆ ಒಟ್ಟು 11 ಅಲಿಯಾಸ್ ಹೆಸರುಗಳಿರುವುದು ಬೆಳಕಿಗೆ ಬಂದಿದೆ.
ಈತನ ವಿರುದ್ಧ ಕರ್ನಾಟಕದ ಮಂಗಳೂರು ಪೂರ್ವ, ಉಳ್ಳಾಲ, ಕೊಣಾಜೆ, ಉಡುಪಿ, ಚಿಕ್ಕಬಳ್ಳಾಪುರ, ಬೆಂಗಳೂರು, ಕುಶಾಲನಗರ ಮಾತ್ರವಲ್ಲದೆ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಒಟ್ಟು 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.

ಮಂಗಳೂರು ಉಳ್ಳಾಲ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯವು ಈತನ ವಿರುದ್ಧ ಬರೋಬ್ಬರಿ 17 ಬಾರಿ ವಾರೆಂಟ್ ಹೊರಡಿಸಿತ್ತು. ಅಲ್ಲದೆ ಮಂಗಳೂರು ಪೂರ್ವ ಠಾಣೆಯ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಜಾರಿಯಾಗಿ, ಬಳಿಕ ನ್ಯಾಯಾಲಯದಿಂದ ಉದ್ಘೋಷಿತ ಅಪರಾಧಿ (Proclamation) ಎಂದು ಘೋಷಿಸಲಾಗಿತ್ತು.
ನಿರಂತರವಾಗಿ ಸ್ಥಳ ಹಾಗೂ ಹೆಸರು ಬದಲಾಯಿಸುತ್ತಾ ಸವಾಲಾಗಿದ್ದ ಈ ಖತರ್ನಾಕ್ ವಂಚಕನನ್ನು ತಡೆದು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿಸಿಬಿ ಪೊಲೀಸರ ಈ ಚಾಣಾಕ್ಷ ಹಾಗೂ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



