September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ ರಾಗಗಳ ರಸದೌತಣವನ್ನು ಸಂಗೀತಾಸಕ್ತರಿಗೆ ಉಣಬಡಿಸಲು ಕಲಾಸಾಧನ ಸಂಸ್ಥೆಯ ವತಿಯಿಂದ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ‘ರಾಗ ಸುಧಾ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮವನ್ನು ಸೆಪ್ಟೆಂಬರ್ 6ರಂದು ಸಂಜೆ 5 ಗಂಟೆಗೆ ನಗರದ ಶ್ರೀ ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಂಗೀತ ಸಂಭ್ರಮದಲ್ಲಿ ಗ್ವಾಲಿಯರ್ ಘರಾನಾದ ಖ್ಯಾತ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯರಾದ ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್, ಗ್ವಾಲಿಯರ್–ಕಿರಾಣಾ ಪದ್ಧತಿಯ ಗಾಯಕ ಹಾಗೂ ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್ ಮತ್ತು ಪಂಡಿತ್ ಮಾಣಿಕ್ ರಾವ್ ಅವರ ಶಿಷ್ಯ, ತಬಲಾ ವಾದಕ ಹಾಗೂ ಗಾಯಕ ಅಕ್ಷಯ ಜೋಶಿ ಅವರು ಸಂಗೀತ ಪ್ರಸ್ತುತಿ ನೀಡಲಿದ್ದಾರೆ.

ಸ್ವಾಮಿ ಜಿತಕಾಮಾನಂದಜಿ ಉದ್ಘಾಟನೆ:

ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಗಣ್ಯರು ಆಗಮಿಸಿದ ಕಲಾವಿದರನ್ನು ಸನ್ಮಾನಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

10 ವರ್ಷಗಳಿಂದ ಶಾಸ್ತ್ರೀಯ ಸಂಗೀತದ ಸೇವೆ:

ಕಲಾಸಾಧನ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಚಾರ ಹಾಗೂ ಪೋಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆಯನ್ನು ಒದಗಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಖ್ಯಾತ ಗಾಯಕ ಆದಿತ್ಯ ಮೋದಕ್:

ಎಳೆಯ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಆರಂಭಿಸಿದ ಆದಿತ್ಯ ಮೋದಕ್, ಚಂದ್ರಕಾಂತ್ ಪಾರ್ಕರ್ ಅವರಿಂದ ಐದು ವರ್ಷಗಳ ಕಾಲ ಹಾಗೂ ನಂತರ ಪ್ರದೀಪ್ ಧೋಂಡ್ ಅವರಿಂದ ನಾಲ್ಕು ವರ್ಷಗಳ ಕಾಲ ಸಂಗೀತಾಭ್ಯಾಸ ನಡೆಸಿದ್ದಾರೆ. ಅವರು ಗ್ವಾಲಿಯರ್ ಘರಾನಾದ ಖ್ಯಾತ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯರಲ್ಲಿ ಒಬ್ಬರಾಗಿದ್ದಾರೆ.

ಅವರು ಪಂ. ರಾಮ ಮರಾಠೆ ಪುರಸ್ಕಾರ – ಪುಣೆ (2025), ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪುರಸ್ಕಾರ – ಧಾರವಾಡ (2025) ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ಪಂಡಿತ್ ವಸಂತರಾವ್ ದೇಶಪಾಂಡೆ ಪುರಸ್ಕಾರ (2016), ಪಂಡಿತ್ ಸವಾಯಿ ಗಂಧರ್ವ ವಿದ್ಯಾರ್ಥಿವೇತನ, ಪಂಡಿತ್ ಭೀಮಸೇನ ಜೋಶಿ ವಿದ್ಯಾರ್ಥಿವೇತನ ಹಾಗೂ ರಾಷ್ಟ್ರೀಯ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಅಮೆರಿಕದ ವೇದಿಕ್ ಹೆರಿಟೇಜ್ ಇಂಕ್ ಆಯೋಜಿಸಿದ ಅಂತರರಾಷ್ಟ್ರೀಯ ಸಂಗೀತ ಉತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಪ್ರಸ್ತುತಿ ನೀಡಿದ್ದಾರೆ. ಮುಂಬೈನ ರಂಗಸ್ಟರ್ ಸಂಸ್ಥೆ ಆಯೋಜಿಸಿದ್ದ ವೈ.ಬಿ. ಚವಾಣ್ ಕೇಂದ್ರ ಕಾರ್ಯಕ್ರಮದಲ್ಲಿಯೂ ಭಾಗವಹಿಸಿರುವ ಮೇರು ಕಲಾವಿದರಾಗಿದ್ದಾರೆ.

ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್:

ಸೂರ್ಯಕಲಾ ಭಟ್ ಹಾಗೂ ಶ್ರೀಧರ್ ಭಟ್ ಅವರ ಪುತ್ರರಾದ ಸತೀಶ್ ಭಟ್ ಹೆಗ್ಗಾರ್, ಜಾನಕಿ ಭಟ್ ಅವರಲ್ಲಿ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಬಳಿಕ ಯಲ್ಲಾಪುರದ ವಿದ್ವಾನ್ ಗಣಪತಿ ಹೆಗಡೆ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಕೆಯನ್ನು ಮುಂದುವರಿಸಿದ್ದಾರೆ. ಕಳೆದ 18 ವರ್ಷಗಳಿಂದ ಗ್ವಾಲಿಯರ್–ಕಿರಾಣಾ ಪದ್ಧತಿಯಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ಅವರು, ಕರ್ನಾಟಕ ಕಾಲೇಜು ಧಾರವಾಡದಲ್ಲಿ ಬಿ.ಮ್ಯೂಸಿಕ್ ಪದವಿ ಪಡೆದಿದ್ದಾರೆ. ಹಾರ್ಮೋನಿಯಂ ಸ್ವತಂತ್ರ ವಾದನ ಕಾರ್ಯಕ್ರಮಗಳನ್ನೂ ನೀಡುತ್ತಿರುವ ಅವರು, CCRT ನವದೆಹಲಿ ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದಿದ್ದಾರೆ. ಪುಣೆ, ಮುಂಬೈ, ದೆಹಲಿ, ಪಂಜಾಬ್, ಅಯೋಧ್ಯೆ, ಒಡಿಶಾ, ಹೈದರಾಬಾದ್, ಚೆನ್ನೈ, ಕೇರಳ, ಗೋವಾ, ನಾಗಪುರ ಸೇರಿದಂತೆ ದೇಶದ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

‘ಗಾನಯೋಗಿ’ ಚಲನಚಿತ್ರದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿರುವುದು ಅವರ ಮತ್ತೊಂದು ವಿಶೇಷತೆ.

ತಬಲಾ ವಾದಕ ಅಕ್ಷಯ ಜೋಶಿ:

ಅಕ್ಷಯ ಜೋಶಿ ಅವರು ಪಂಡಿತ್ ಮಾಣಿಕ್ ರಾವ್ ಗೋನ್ಸಾರ್ ಅವರ ಶಿಷ್ಯರಾಗಿದ್ದು, ಪ್ರಸ್ತುತ ಧಾರವಾಡದ ಡಾ. ಪಂಡಿತ್ ರವಿಕಿರಣ್ ನಕೋಡ್ ಹಾಗೂ ಪಂಡಿತ್ ರಘುನಾಥ್ ನಕೋಡ್ ಅವರಿಂದ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ತಬಲಾ ಸೋಲೋ ಪ್ರದರ್ಶನದ ಜತೆಗೆ ಗಾಯನ, ವಾದ್ಯ ಸಂಗೀತ, ಜುಗಲ್‌ಬಂದಿ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳಿಗೆ ಪಕ್ಕವಾದ್ಯವನ್ನೂ ನುಡಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆ ಹಾಗೂ ಬಾಗಲಕೋಟೆಯ BVVSನಲ್ಲಿ ನಡೆದ ತಬಲಾ ಸೋಲೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಪಂಡಿತ್ ಜಯತೀರ್ಥ ಮೇವುಂಡಿ ಆಯೋಜಿಸಿದ್ದ ಹುಬ್ಬಳ್ಳಿ, ಇಲಕಲ್ ಹಾಗೂ ಧಾರವಾಡದ ‘ಸ್ವರತೀರ್ಥ’ ಉತ್ಸವ, ಕೇರಳದ ಪಯ್ಯನೂರಿನಲ್ಲಿ ನಡೆದ ‘ತುರಿಯಮ್’ ಉತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಅಮೆರಿಕದ ಕಲಾವಿದರ ಯೋಜನೆಯಾದ ‘Leap Year of Faith’ ಆಲ್ಬಮ್‌ಗೆ ತಬಲಾ ವಾದನ ನೀಡಿರುವ ಅವರು, ಮೈಸೂರು ದಸರಾ 2023ರ ಅಂಗವಾಗಿ ತಬಲಾ ಸೋಲೋ ಪ್ರದರ್ಶನವನ್ನೂ ನೀಡಿದ್ದಾರೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಈ ಮೂವರು ಕಲಾವಿದರ ಸಂಗೀತ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಲಾಸಾಧನ ಸಂಸ್ಥೆ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

You may also like

News

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯಿಂದ ಅದ್ದೂರಿ 37ನೇ ಶಿಕ್ಷಕರ ದಿನಾಚರಣೆ

“ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿ ಜೀವನಕ್ಕೆ ದಾರಿದೀಪ” – ಬಿಷಪ್ ಡಾ. ಪೀಟರ್ ಪಾವ್ಲ್ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ
News

ಕಲ್ಲುಗುಂಡಿ ದರೋಡೆ ಪ್ರಕರಣದಲ್ಲಿ ಶ್ರೀನಿವಾಸ ದೋಷಮುಕ್ತ

ಆರೋಪಿ ಪರ ಪ್ರಖ್ಯಾತ ವಕೀಲರಾದ ಪುತ್ತೂರು ಮಹೇಶ್ ಕಜೆ ಯಶಸ್ವಿ ವಾದ ಪುತ್ತೂರು: ಸುಮಾರು 13 ವರ್ಷಗಳ ಹಿಂದೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ

You cannot copy content of this page