ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ
ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ

ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು ಆಚರಿಸುವ ಮೊಸರು ಕುಡಿಕೆ ಉತ್ಸವವು ಅರ್ಥಪೂರ್ಣವಾಗುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಮಾಣಿ ಗಾಂಧಿ ಮೈದಾನದಲ್ಲಿ ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಒಗ್ಗಟ್ಟಿನಿಂದ ಆಚರಿಸಿದಾಗ ಸಮಾಜಕ್ಕೆ ಉತ್ತಮ ಸಂದೇಶ ತಲುಪುತ್ತದೆ. ಈ ನಿಟ್ಟಿನಲ್ಲಿ ಮಾಣಿ ಯುವಕ ಮಂಡಲವು ಕಳೆದ ಹಲವು ವರ್ಷಗಳಿಂದ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರುತ್ತಾ ಈ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಿದರು.

ಗಣ್ಯರ ಉಪಸ್ಥಿತಿ ಹಾಗೂ ಸನ್ಮಾನ:
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬೇಬಿ ಕುಂದರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಲಾಲ್ ನಾವೂರು ಭಾಗವಹಿಸಿದ್ದರು.





ವೇದಿಕೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕುಶಲ ಎಂ. ಪೆರಾಜೆ, ನೇರಳಕಟ್ಟೆ ಸೊಸೈಟಿ ಮಾಜಿ ನಿರ್ದೇಶಕ ನಿರಂಜನ್ ರೈ ಕುರ್ಲೆತ್ತಿಮಾರು ಹಾಗೂ ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೆ. ಮಾಣಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ, ಮಾಣಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಹಾಗೂ ಮಾಣಿ ಕರ್ನಾಟಕ ಪ್ರೌಢ ಶಾಲೆಯ ನಿವೃತ್ತ ಸಿಬ್ಬಂದಿ ತಿಮ್ಮಪ್ಪ ಕೆ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.







ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ:
ಸಭಾ ಕಾರ್ಯಕ್ರಮಕ್ಕೂ ಮುನ್ನ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸಂಕೀರ್ತಣೆ ಜರುಗಿತು. ಬಳಿಕ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಪುತ್ತೂರಿನ ‘ಸಂಗಮ್ ಬ್ರದರ್ಸ್’ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ ಸಾಗು, ಉಪಾಧ್ಯಕ್ಷ, ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ನಾಗರಾಜ್ ಪೂಜಾರಿ ಕೋಡಿ, ಕ್ರೀಡಾ ಕಾರ್ಯದರ್ಶಿ ಜಯರಾಮ ಪೂಜಾರಿ, ಸಂಘಟನಾ ಕಾರ್ಯದರ್ಶಿ ರಾಜೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಅಕ್ಷಿತ್ ಪೂಜಾರಿ ಸೇರಿದಂತೆ ಮೂಸಾ ಕರೀಂ ಮಾಣಿ, ವಿಕೇಶ್ ಶೆಟ್ಟಿ ಕೊಡಾಜೆ, ಮಹಮ್ಮದ್ ಹಬೀಬ್, ದಯಾನಂದ ಪೂಜಾರಿ, ಗಿರೀಶ್ ಪೂಜಾರಿ, ಹರೀಶ್ ಮಾಣಿ, ಅಬ್ದುಲ್ ಮಜೀದ್, ಪ್ರಕಾಶ್ ಮಾಣಿ, ಬೇಬಿ ಸುವರ್ಣ, ಮಹಮ್ಮದ್ ಅಶ್ರಫ್, ಧನುಶ್ ಶೆಟ್ಟಿ, ರಕ್ಷನ್ ಕಾಪಿಕಾಡು ಮತ್ತಿತರ ಪ್ರಮುಖರು ಭಾಗವಹಿಸಿದ್ದರು.


ಮಾಣಿ ಯುವಕ ಮಂಡಲದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಚಾಲಕ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.




