ಜಿಲ್ಲಾಮಟ್ಟದ ಟೇಕ್ವಾಂಡೋದಲ್ಲಿ ರಿಯೋನ್ ಲಸ್ರಾದೊ ಚಿನ್ನದ ಸಾಧನೆ – ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆ
ವಿಟ್ಲದ ಪಿಎಂಶ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಿಯೋನ್ ಲಸ್ರಾದೊ 41 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ರಿಯೋನ್ ಲಸ್ರಾದೊ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.


ರಿಯೋನ್ ಅವರ ಸಾಧನೆಗೆ ಮಾಧವ ಅಳಿಕೆ ಅವರ ಮಾರ್ಗದರ್ಶನ ಹಾಗೂ ರೋಹಿತ್ ಎಸ್.ಎನ್. ಅವರ ತರಬೇತಿ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಯ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಭಗಿನಿ ಅನಿತಾ ಅವರ ಮಾರ್ಗದರ್ಶನವೂ ಸಾಧನೆಗೆ ಪ್ರೇರಣೆಯಾಗಿದೆ.


ರಿಯೋನ್ ಲಸ್ರಾದೊ ಅವರು ರೋಶನ್ ಲಸ್ರಾದೊ ಮತ್ತು ಸುಶಾಂತಿ ಸುಪ್ರಿಯ ದಂಪತಿಯ ಪುತ್ರರಾಗಿದ್ದು, ಜಿಲ್ಲಾ ಮಟ್ಟದಲ್ಲಿ ಮಿಂಚಿನ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶಾಲೆ ಹಾಗೂ ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ. ರಾಜ್ಯಮಟ್ಟದ ಪಂದ್ಯಾಟದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂದು ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.



