10 ವರ್ಷಗಳ ಸಮಾಜಸೇವೆ – ‘ಅವೇಕ್ ಕುಡ್ಲ’ ಅಭಿಯಾನ ವಿಸ್ತರಣೆಗೆ ಸಜ್ಜು
ಮಂಗಳೂರಿನ ಸ್ವಚ್ಛತೆ, ಪರಿಸರ ಸಂರಕ್ಷಣೆ, ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ ಒಂದು ದಶಕದಿಂದ ತೊಡಗಿಸಿಕೊಂಡಿರುವ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಮುಂದಿನ ದಿನಗಳಲ್ಲಿ ‘ಅವೇಕ್ ಕುಡ್ಲ’ ಅಭಿಯಾನವನ್ನು ನಗರದಾದ್ಯಂತ ವಿಸ್ತರಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದೆ. ಟ್ರಸ್ಟ್‌ನ ಹತ್ತು ವರ್ಷಗಳ ಸಮಾಜಸೇವಾ ಪಯಣವನ್ನು ಸ್ಮರಿಸುವ ಹಾಗೂ ‘ಅವೇಕ್ ಕುಡ್ಲ’ ಅಭಿಯಾನದ ಮುಂದಿನ ರೂಪುರೇಷೆಗಳನ್ನು ಚರ್ಚಿಸುವ ವಿಶೇಷ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಶನಿವಾರ ಮಂಗಳೂರಿನ ರೆಡ್‌ಕ್ರಾಸ್ ಸೆಂಟಿನರಿ ಬಿಲ್ಡಿಂಗ್‌ನ ಪ್ರೇರಣಾ ಅಡಿಟೋರಿಯಂನಲ್ಲಿ ನಡೆಯಿತು.




ಕಾರ್ಯಕ್ರಮದ ಅಂಗವಾಗಿ “ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿನ ಸವಾಲುಗಳು–ಪರಿಹಾರ ಕಂಡುಕೊಳ್ಳುವಲ್ಲಿ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಸಂವಾದ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಐಎಎಸ್ ಹಾಗೂ ಮಂಗಳೂರು ನಗರ ಪೊಲೀಸ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ. ರವಿಶಂಕರ್, ಕೆಎಸ್‌ಪಿಎಸ್ ಅವರು ಸಂವಾದದಲ್ಲಿ ಭಾಗವಹಿಸಿ ನಗರದ ತ್ಯಾಜ್ಯ ಮತ್ತು ಸಂಚಾರ ನಿರ್ವಹಣೆಯ ಸವಾಲುಗಳು ಹಾಗೂ ಸಾರ್ವಜನಿಕ ಸಹಕಾರದ ಅಗತ್ಯತೆಯ ಕುರಿತು ಅಭಿಪ್ರಾಯ ಹಂಚಿಕೊಂಡರು. ಸಂವಾದವನ್ನು ರೇಡಿಯೋ ಸಾರಂಗ್‌ನ ಮುಖ್ಯ ಕಾರ್ಯನಿರ್ವಾಹಕ ಅಭಿಷೇಕ್ ಶೆಟ್ಟಿ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಮಠ, ಮಂಗಳೂರಿನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಸುಸಜ್ಜಿತ ನಿರ್ವಹಣೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.







2015ರಿಂದ ಟ್ರಸ್ಟ್ ವತಿಯಿಂದ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಸಂಚಾರ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಆರಂಭಗೊಂಡ ‘ಅವೇಕ್ ಕುಡ್ಲ’ ಅಭಿಯಾನದಡಿ ಮಂಗಳಾದೇವಿ, ಹೊಯಿಗೆ ಬಜಾರ್ ಹಾಗೂ ಬೋಳಾರ ವಾರ್ಡ್‌ಗಳಲ್ಲಿ ಮಾದರಿ ವಾರ್ಡ್ ಯೋಜನೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗುಜ್ಜರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಸ್ಟ್‌ನ ಸ್ವಯಂಸೇವಕರು ನಿರಂತರ ಶ್ರಮದಾನ, ಸ್ವಚ್ಛತಾ ಕಾರ್ಯ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, “ಸ್ವಚ್ಛತೆ ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು” ಎಂಬ ಸಂದೇಶವನ್ನು ಸಾರುತ್ತಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಹತ್ತು ವರ್ಷಗಳ ಸಮಾಜಸೇವಾ ಚಟುವಟಿಕೆಗಳನ್ನು ದಾಖಲಿಸಿರುವ ಟ್ರಸ್ಟ್ ಆಲ್ಬಮ್ ಬಿಡುಗಡೆ ಮಾಡಲಾಯಿತು.

ಟ್ರಸ್ಟ್‌ನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಹಾಗೂ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಟ್ರಸ್ಟ್ ಅಧ್ಯಕ್ಷ ಅ. ಸೀತಾರಾಮ್ ವಹಿಸಿದ್ದರು. ಅವರು ಮಾತನಾಡಿ, “ನಮ್ಮ ಊರು–ನಮ್ಮ ಹೆಮ್ಮೆ, ನಮ್ಮ ಪರಿಸರ–ನಮ್ಮ ಜವಾಬ್ದಾರಿ” ಎಂಬ ಆಶಯದೊಂದಿಗೆ ಮುಂದಿನ ದಿನಗಳಲ್ಲಿ ಟ್ರಸ್ಟ್‌ನ ಸೇವಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ CA ನಿತಿನ್ ಜೆ. ಶೆಟ್ಟಿ, ಪುಷ್ಪರಾಜ್ ಬಿ.ಎನ್., ಡಾ. ಸತೀಶ್ ರಾವ್, ಚಿತ್ತರಂಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ ಡಾ. ಪ್ರವೀಣ್ ಕೆ. ಧನ್ಯವಾದ ಸಲ್ಲಿಸಿದರು. ಟ್ರಸ್ಟಿನ ಪದಾಧಿಕಾರಿಗಳು, ತಜ್ಞರ ಸಮಿತಿ ಸದಸ್ಯರು, ಸಂಯೋಜಕರು ಹಾಗೂ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂಗಳೂರು ನಗರವನ್ನು ಸ್ವಚ್ಛ, ಸುಂದರ, ಸುರಕ್ಷಿತ ಹಾಗೂ ಸುಗಮ ನಗರವನ್ನಾಗಿ ರೂಪಿಸಲು ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.



