ಧರ್ಮಸ್ಥಳದಲ್ಲಿ 28ನೇ ಭಜನಾ ತರಬೇತಿ ಶಿಬಿರದ ಸಮಾರೋಪ – 6 ಸಾವಿರ ಭಜನಾಪಟುಗಳ ಭವ್ಯ ಶೋಭಾಯಾತ್ರೆ
ಭಜನೆಯಿಂದ ಭಗವಂತನ ಸಾಕ್ಷಾತ್ಕಾರ, ಉತ್ತಮ ಸಂಸ್ಕಾರ: ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ

ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಶ್ರದ್ಧೆ ಮತ್ತು ಭಕ್ತಿಯಿಂದ ಭಜನೆ ಮಾಡುವುದರಿಂದ ಭಗವಂತನ ಸಾಕ್ಷಾತ್ಕಾರದ ಜೊತೆಗೆ ಭಜಕರಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಅಕ್ಟೋಬರ್ 5ರಂದು ಭಾನುವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.






ರಾಗ, ತಾಳ ಮತ್ತು ಲಯಬದ್ಧವಾಗಿ ಶಿಸ್ತಿನಿಂದ ಭಜನೆ ಹಾಡುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ನಾಡಿನ ಅನೇಕ ಸಾಧು-ಸಂತರು ಭಕ್ತಿಯಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡು ದೇವರ ಅನುಗ್ರಹ ಪಡೆದಿದ್ದಾರೆ. ಭಜನೆಯಿಂದ ನಮ್ಮಲ್ಲಿರುವ ಸಾತ್ವಿಕ ಶಕ್ತಿ ಜಾಗೃತವಾಗಿ ನೈತಿಕತೆ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಪ್ರಾರ್ಥನೆ, ಜಪ, ತಪ ಮತ್ತು ಧ್ಯಾನದಿಂದ ಭಕ್ತರು ಹಾಗೂ ಭಗವಂತನ ನಡುವೆ ಅವಿನಾಭಾವ ಸಂಬಂಧ ಮೂಡುತ್ತದೆ ಎಂದ ಅವರು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ವಿವಿಧ ಜನಮಂಗಳ ಕಾರ್ಯಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.






ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷಿ ಸಂಸ್ಕೃತಿ ಹಾಗೂ ಋಷಿ ಸಂಸ್ಕೃತಿಯನ್ನು ಮರೆಯಬಾರದು. ಭಜನೆಯಿಂದ ನಾಲಗೆ ಪವಿತ್ರವಾಗಿ ಸಾರ್ಥಕ ಬದುಕಿಗೆ ಪ್ರೇರಣೆ ದೊರೆಯುತ್ತದೆ. ಭಾವಪೂರ್ಣವಾಗಿ ಭಜನೆ ಮಾಡುವುದರಿಂದ ನೈತಿಕ ಹಾಗೂ ಧಾರ್ಮಿಕ ಜೀವನಮಟ್ಟವೂ ಉನ್ನತಿಗೇರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಡೆದ ಅನುಭವವನ್ನು ತಮ್ಮ ಊರುಗಳಲ್ಲಿ ಸದುಪಯೋಗಪಡಿಸಿಕೊಂಡು ಸಮಾಜದ ಪ್ರಗತಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ನಿತ್ಯವೂ ರಾಗ, ತಾಳ ಮತ್ತು ಲಯಬದ್ಧವಾಗಿ ಭಜನೆ ಹಾಡಿ ಸಾರ್ಥಕ ಜೀವನ ನಡೆಸುವಂತೆ ಕರೆ ನೀಡಿದರು. ಕಮ್ಮಟದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಹಿರಿಯ ವಿದ್ವಾಂಸರನ್ನು ಅಭಿನಂದಿಸಿದರು.

ಶಿಬಿರಾರ್ಥಿಗಳಿಂದ ಸಾಮೂಹಿಕ ನೃತ್ಯ ಭಜನೆ ಹಾಗೂ ಕುಣಿತ ಭಜನೆ ನಡೆಯಿತು. ಇದೇ ಸಂದರ್ಭದಲ್ಲಿ 400 ಭಜನಾ ತಂಡಗಳ ಸುಮಾರು 6,000 ಭಜನಾಪಟುಗಳಿಂದ ಬೃಹತ್ ಶೋಭಾಯಾತ್ರೆ ನಡೆಯಿತು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಲ್ಲಿಸಿ, ಒಂದು ವಾರ ನಡೆದ ಕಮ್ಮಟದಲ್ಲಿ 107 ಪುರುಷರು ಹಾಗೂ 105 ಮಹಿಳೆಯರು ಸೇರಿದಂತೆ ಒಟ್ಟು 212 ಶಿಬಿರಾರ್ಥಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು. ಬ್ರಹ್ಮಾವರದ ತಿಮ್ಮಪ್ಪ ಕರ್ಕೇರಾ ಹಾಗೂ ಸುಳ್ಯದ ಶ್ರೀಲತಾ ಕಮ್ಮಟದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.



